ಭಾರತವನ್ನು ಮಣಿಸಿದ ತಂಡ ವಿಶ್ವಕಪ್ ಚಾಂಪಿಯನ್‌ ಆಗಲಿದೆ: ಮೈಕಲ್‌ ವಾನ್‌

0
12

ಮ್ಯಾಂಚೆಸ್ಟರ್:- ಗೆಲುವಿನ ಲಯದಲ್ಲಿ ಮುಂದುವರಿಯುತ್ತಿರುವ ಭಾರತವನ್ನು ಯಾವ ತಂಡ ಸೋಲಿಸುತ್ತದೆಯೋ ಆ ತಂಡ ಐಸಿಸಿ ವಿಶ್ವಕಪ್‌ ಪ್ರಶಸ್ತಿ ಗೆಲ್ಲಲಿದೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಕೊಹ್ಲಿ ಪಡೆಯನ್ನು ಶ್ಲಾಘಿಸಿದ್ದಾರೆ.

ಗುರುವಾರ ಭಾರತ 125 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ ನಂತರ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್‌ ವಾನ್‌, “ಭಾರತವನ್ನು ಸೋಲಿಸುವ ತಂಡ ಈ ಬಾರಿಯ ವಿಶ್ವಕಪ್ ಚಾಂಪಿಯನ್ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡು ಬಾರಿ ವಿಶ್ವಚಾಂಪಿಯನ್ ಆಗಿರುವ ಭಾರತ ತಂಡ, ಪ್ರಸ್ತುತ ವಿಶ್ವಕಪ್ ನಲ್ಲಿ ಅದ್ಭುತ ಲಯದಲ್ಲಿದೆ. ಇದುವರೆಗೂ ಸೋಲನ್ನೇ ಕಾಣದ ಏಕೈಕ ತಂಡವಾಗಿ ಮುಂದುವರಿದಿದ್ದು, ಒಟ್ಟು ಆರು ಪಂದ್ಯಗಳಿಂದ ಐದರಲ್ಲಿ ಜಯಗಳಿಸುವುದರೊಂದಿಗೆ ( ಒಂದು ಪಂದ್ಯ ಮಳೆಯಿಂದ ರದ್ದಾಗಿದೆ) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ತನ್ನ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿರುವ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್, ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿಗೆ ಕೊಹ್ಲಿ ಪಡೆಗೆ ಅಭಿನಂದನೆ ತಿಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ. ಇನ್ನುಳಿದಂತೆ ಮಾಜಿ ಕ್ರಿಕೆಟಿಗರು ಸಹ ಭಾರತದ ಗೆಲುವಿಗೆ ಟ್ವಿಟರ್ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
“ಪರಸ್ಪರ ಹೊಂದಾಣಿಕೆ ಭಾರತ ತಂಡದ ಯಶಸ್ಸಿನ ಮಂತ್ರವಾಗಿದೆ. ಆರಂಭದಲ್ಲಿ ಭಾರತ ತಂಡಕ್ಕೆ ಸುಮಾರು 30 ರನ್ ಗಳು ಕೊರತೆಯಾದಂತೆ ಕಂಡುಬಂದರೂ ಬೌಲರ್ ಗಳ ಅದ್ಭುತ ಪ್ರದರ್ಶನದಿಂದ ತಂಡಕ್ಕೆ ಗೆಲುವು ದೊರೆಯಿತು. ಅಮೋಘ ಪ್ರದರ್ಶನ ನೀಡಿದ ಯಜುವೇಂದ್ರ ಚಾಹಲ್ ಗೆ ಅಭಿನಂದನೆಗಳು” ಎಂದು ಸುರೇಶ್ ರೈನಾ ಟ್ವಿಟ್‌ ಮಾಡಿದ್ದಾರೆ.
ಇದೊಂದು ಅದ್ಭುತ ಜಯ. ಅತ್ಯಂತ ಉತ್ಸಾಹ ಹಾಗೂ ಆಕ್ರಮಣಕಾರಿ ದಾಳಿ ನಡೆಸಿದ ಮೊಹಮ್ಮದ್ ಶಮಿ ಭಾರತ ತಂಡ ಅಜೇಯವಾಗುಳಿಯುವಂತೆ ಮಾಡಿದರು ಎಂದು ಭಾರತ ತಂಡದ ಮಾಜಿ ಆಟಗಾರ ಮೊಹಮದ್ ಕೈಫ್ ಟ್ವಿಟ್‌ ಮಾಡಿದ್ದಾರೆ.

ಭಾರತದ ಮತ್ತೊಂದು ಸಮಗ್ರ ಗೆಲುವು. ಪ್ರತಿಯೊಬ್ಬರಿಂದಲೂ ಅದ್ಭುತ ಪ್ರದರ್ಶನ ಮೂಡಿಬಂದಿದ್ದು, ಮುಂದಿನ ಎದುರಾಳಿಗಳಿಗೆ ಭಾರತ ನೀಡಿರುವ ಪ್ರಬಲ ಮುನ್ಸೂಚನೆ ಎಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್ ಟ್ವಿಟ್‌ ಮಾಡಿದ್ದಾರೆ.

loading...