ತಡವಾಗಿ ಸಾಧಿಸಿದ ಗೆಲುವಿನಿಂದ ಪ್ರಯೋಜನವಿಲ್ಲ : ಫಾಫ್‌ ಡುಪ್ಲೇಸಿಸ್‌

0
2

ಚೆಸ್ಟರ್‌-ಲೀ-ಸ್ಟ್ರೀಟ್‌:- ಶ್ರೀಲಂಕಾ ವಿರುದ್ಧ ಗೆದ್ದು ತಡವಾಗಿ ಲಯಕ್ಕೆ ಮರಳಿರುವುದು ಪ್ರಸಕ್ತ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ನಮಗೆ ಯಾವುದೇ ಲಾಭವಿಲ್ಲ ಎಂದು ದಕ್ಷಿಣ ಆಫ್ರಿಕಾ ನಾಯಕ ಫಾಫ್‌ ಡುಪ್ಲೇಸಿಸ್‌ ಹೇಳಿದರು.
ಶುಕ್ರವಾರ ರಿವರ್‌ ಸೈಡ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 204 ರನ್‌ ಗುರಿಯನ್ನು ದಕ್ಷಿಣ ಆಫ್ರಿಕಾ 37.2 ಓವರ್‌ಗಳಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 206 ರನ್‌ ಗಳಿಸಿ ಒಂಬತ್ತು ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆ ಮೂಲಕ ಎರಡನೇ ಗೆಲುವನ್ನು ಆಫ್ರಿಕಾ ತನ್ನದಾಗಿಸಿಕೊಂಡಿತು. ಈಗಾಗಲೇ ಐಸಿಸಿ ವಿಶ್ವಕಪ್‌ನಿಂದ ನಿರ್ಗಮಿಸಿರುವ ಫಾಫ್‌ ಡುಪ್ಲೇಸಿಸ್‌ ಪಡೆಗೆ ಈ ಗೆಲುವು ಅನುಕೂಲವಾಗಲಿಲ್ಲ. ಆದರೆ, ಈ ಪಂಂದ್ಯದ ಸೋಲಿನಿಂದ ಶ್ರೀಲಂಕಾ ಸೆಮಿಫೈನಲ್ಸ್‌ ಆಸೆ ಕಮರಿತು.
ಪಂದ್ಯದ ಬಳಿಕ ಮಾತನಾಡಿದ ಡುಪ್ಲೇಸಿಸ್, ಹಲವು ಪಂದ್ಯಗಳ ಸೋಲಿನ ಬಳಿಕ ಉತ್ತಮ ಲಯಕ್ಕೆ ನಾವು ಮರಳಿದ್ದೇವೆ. ಆದರೆ, ಕಾಲ ಮೀರಿ ಹೋಗಿದೆ. ನಮ್ಮ ತಂಡದ ಸಾಮರ್ಥ್ಯ ಏನೆಂಬುದು ಈ ಗೆಲುವು ನಿರೂಪಿಸಿದೆ. ಬೌಲಿಂಗ್‌ ಪ್ರದರ್ಶನ ಅದ್ಭುತವಾಗಿತ್ತು ಎಂದು ಹೇಳಿದರು.
ಡ್ವೇನ್‌ ಪ್ರೆಟೋರಿಯಸ್‌ ಅಸಾಧಾರಣ ಬೌಲರ್‌. ಇವರನ್ನು ಕಳೆದ ಪಂದ್ಯಗಳಲ್ಲಿ ಅಂತಿಮ 11ಕ್ಕೆ ತರಲು ತುಂಬಾ ಪ್ರಯತ್ನ ನಡೆಸಿದ್ದೆವು. ಆದರೆ, ತಂಡದ ಸಂಯೋಜನೆ ಕಾರಣದಿಂದಾಗಿ ಅವರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಇಲ್ಲಿನ ಪಿಚ್‌ಗೆ ನೇರ ಎಸೆತಗಳನ್ನು ಎಸೆಯುವವರು ಅಗತ್ಯವಿತ್ತು. ಹಾಗಾಗಿ, ಡ್ವೇನ್‌ ಹಾಗೂ ಫೆಹ್ಲುಕ್ವಾಯೊ ಅವರಿಗೆ ಅವಕಾಶ ನೀಡಲಾಯಿತು ಎಂದು ಹೇಳಿದರು.ಕೊನೆಗೂ ನಮ್ಮ ಬ್ಯಾಟಿಂಗ್‌ ವಿಭಾಗ ಉತ್ತಮ ಪ್ರದರ್ಶನ ತೋರಿತು. ನಮ್ಮ ತಂಡದಿಂದ ಶುಕ್ರವಾರ ಮೂಲ ಬ್ಯಾಟಿಂಗ್‌ ಅದ್ಭುತವಾಗಿ ಮೂಡಿ ಬಂತು. ಅಂದುಕೊಂಡಂತೆ ಅತಿ ದೊಡ್ಡ ಜತೆಯಾಟ ಮೂಡಿಬಂತು. ಒಂದು ದೊಡ್ಡ ಜತೆಯಾಟ ಬಂದಲ್ಲಿ ಮುಂದಿನ ಎಲ್ಲ ಅಂಶಗಳು ತಂಡದ ಪರವಾಗಲಿದೆ ಎಂದು ಡುಪ್ಲೇಸಿಸ್‌ ತಿಳಿಸಿದರು.

loading...