ಜಿಂದಾಲ್‌ಗೆ ಭೂಮಿ ಮಾರಾಟದ ವಿರುದ್ಧ ಹೋರಾಟ ಮುಂದುವರಿಸಿದ ಎಚ್ ಕೆ ಪಾಟೀಲ್

0
25

ಬೆಂಗಳೂರು,-ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ಮಾಡುವ ಕುರಿತಂತೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಚ್ ಕೆ ಪಾಟೀಲ್ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ
ಗೃಹ ಸಚಿವ ಎಂ ಬಿ ಪಾಟೀಲ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ರಚಿಸಿರುವ ಸಚಿವ ಸಂಪುಟ ಉಪಸಮಿತಿಗೆ ಮೂರು ಪುಟಗಳ ಪತ್ರ ಬರೆದಿರುವ ಪಾಟೀಲ್, ಕೆಲವು ಆಕ್ಷೇಪಗಳ ಬಗ್ಗೆ ಸಮಿತಿಯ ಗಮನ ಸೆಳೆದಿದ್ದಾರೆ
ತಮ್ಮ ಆಕ್ಷೇಪಗಳ ಬಗ್ಗೆ ಉಪ ಸಮಿತಿ ಸಮರ್ಪಕವಾಗಿ ಪರಿಶೀಲಿಸಿ ಶಿಫಾರಸ್ಸು ಮಾಡುವ ಆಶಯವಿದೆ, ಇಷ್ಟು ದೊಡ್ಡ ಪ್ರಮಾಣದ ಭೂಮಿ ಖಾಸಗಿ ಸಂಸ್ಥೆಯೊಂದಕ್ಕೆ ಪರಭಾರೆ ಮಾಡುವ ನಿರ್ಣಯ ರಾಜ್ಯದ ಒಟ್ಟಾರೆ-ಸಮಗ್ರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಪರಿಶೀಲಿಸಿ ಶಿಫಾರಸ್ಸು ಮಾಡಬೇಕಿದೆ ಎಂದು ಅವರು ತಿಳಿಸಿದ್ದಾರೆ
ಭೂಮಿ ಮಾರಾಟ ಮಾಡಿದ ಮೇಲೆ ಆ ಭೂಮಿಯ 3 ಅಡಿ ಆಳದಿಂದ ಹಿಡಿದು ಭೂಮಿಯ ಒಳಗಡೆ ಲಭ್ಯವಾಗಬಹದಾದ ಖನಿಜ ಸಂಪತ್ತು, ನಿಕ್ಷೇಪಗಳು ಅಥವಾ ಇನ್ನಾವುದೇ ಸಂಪತ್ತು ಈಭೂಮಿಯ ಮಾಲೀಕನಿಗೆ ಸೇರಿದ್ದಾಗಿರುತ್ತದೆ ಎಂದು 2014, ಮಾರ್ಚ್ 5ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗಣಿ ಮತ್ತು ಖನಿಜ ಸಂಪತ್ತು (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ 1957ರಡಿಯಲ್ಲಿ ಹೊರಡಿಸಿರುವ ಅಧಿಸೂಚನೆ ತಿಳಿಸುತ್ತದೆ, ಈ ಭೂಮಿ ಲೀಸ್ ಕಂ ಸೇಲ್ ಡೀಡ್ ಮಾಡುವ ಸಂದರ್ಭದಲ್ಲಿ ಈ ಕಾಯ್ದೆಯಡಿ ಅಧಿಸೂಚನೆ ಇರಲಿಲ್ಲ. ಆದರೆ ಈಗ ಒಂದು ವೇಳೆ ಭೂಮಿ ಮಾರಾಟದ ಮೂಲಕ ಪರಭಾರೆಯಾದರೆ ಈ ಭೂಮಿಯ ಖನಿಜ ಸಂಪತ್ತು, ನಿಕ್ಷೇಪಗಳು ಅಥವಾ ಇನ್ನಾವುದೇ ಸಂಪತ್ತು ಜಿಂದಾಲ್ ಸಂಸ್ಥೆಯದ್ದಾಗುತ್ತದೆ, ಆದ್ದರಿಂದ ರಾಜ್ಯ ಸರ್ಕಾರ ನೈಸರ್ಗಿಕ ಸಂಪತ್ತಿನ ಮೇಲಿನ ಈ ಹಕ್ಕನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತದೆ, ಈ ಅಂಶಗಳನ್ನು ಕೂಡ ಸಚಿವ ಸಂಪುಟ ಉಪ ಸಮಿತಿಯು ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ
ಜಿಂದಾಲ್ ಸಂಸ್ಥೆಯು ಮೈಸೂರು ಮಿನರಲ್ಸ್ ಸಂಸ್ಥೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಷರತ್ತುಗಳನ್ನು ಉಲ್ಲಂಘಿಸಿ ಅದಿರಿನ ಅಧಿಮೌಲ್ಯವನ್ನು ಪಾವತಿಸುವ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಮೈಸೂರು ಮಿನರಲ್ಸ್ ಸಂಸ್ಥೆಯ ಪರವಾಗಿ ತೀರ್ಪು ಹೊರಬಿದ್ದಿದೆ, ಈ ತೀರ್ಪಿನಂತೆ ಜಿಂದಾಲ್ ಸಂಸ್ಥೆಯು ಹಣ ಪಾವತಿ ಮಾಡಿದೆಯೇ, ತೀರ್ಪಿನಿಂದ ಕ್ರಮಕೈಗೊಂಡಿದ್ದಾರೆಯೇ ಎಂಬುದನ್ನುಸಮಿತಿ ಪರಿಶೀಲಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ
ಜಿಂದಾಲ್ ಸಂಸ್ಥೆಯಂತಹ ಖಾಸಗಿ ಕಂಪನಿಗಳು ಪ್ರತಿ ಎಕರೆಗೆ 1.22 ಲಕ್ಷ ರೂಪಾಯಿಯಂತೆ ಇಷ್ಟು ಕಡಿಮೆ ದರದಲ್ಲಿ ಶುದ್ಧ ಕ್ರಯಪತ್ರದ ಮೂಲಕ ಭೂಮಿಯನ್ನು ಪರಭಾರೆ ಮಾಡುವುದು ಸಮಂಜಸವೇ ? ಅದರಿಂದ ಸರ್ಕಾರಕ್ಕಾಗುವ ಹಾನಿ ಬಗ್ಗೆ ಅಂದಾಜಿಸಲಾಗಿದೆಯೇ ? ಕೈಗಾರಿಕಾ ನೀತಿ, ಗಣಿಗಾರಿಕೆ ನೀತಿ ಮಾರ್ಗದರ್ಶಿ ಸೂತ್ರಗಳು ಮುಂತಾದವುಗಳ ಹಿನ್ನೆಲೆಯಲ್ಲಿ ಪರಿಶೀಲನೆಗೊಳಪಡಬೇಕು ಸರ್ಕಾರದ ಅಥವಾ ಸಾರ್ವಜನಿಕ ಆಸ್ತಿ ಪರಭಾರೆ ಮಾಡುವ ನಿರ್ಣಯಗಳು ಪಾರದರ್ಶಕವಾಗಿರುವಂತೆ ಮತ್ತು ಸಾಧಕ-ಬಾಧಕಗಳನ್ನು ಸಮಿತಿ ಸಮರ್ಪಕವಾಗಿ ಅಧ್ಯಯನ ಮಾಡಬೇಕು ಎಂದು ಎಚ್ ಕೆ ಪಾಟೀಲ್ ಪತ್ರದಲ್ಲಿ ಗೃಹ ಸಚಿವರನ್ನು ಒತ್ತಾಯಿಸಿದ್ದಾರೆ.
ಲೀಸ್ ಕಮ್ ಸೇಲ್ ಡೀಡ್‌ ನಲ್ಲಿ ಕಾಣಿಸಿದ ಕರಾರುಗಳು ಪಾಲನೆಯಾಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

loading...