ಫಿಫಾ ವಿಶ್ವಕಪ್‌: ಜರ್ಮನಿ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಸ್ವಿಡೆನ್‌

0
16

ರೆನ್ನೆಸ್, ಫ್ರಾನ್ಸ್‌:-ಆರಂಭದಲ್ಲಿ ಹಿನ್ನಡೆ ಅನುಭವಿದರೂ ಬಳಿಕ ಪುಟಿದೆದ್ದ ಸ್ವಿಡೆನ್‌ ತಂಡ ಮಹಿಳಾ ಫಿಫಾ ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಗೆದ್ದು ಅಂತಿಮ ನಾಲ್ಕರ ಘಟಕ್ಕೆ ತಲುಪಿದೆ.
ಶನಿವಾರ ನಡೆದ ಅಂತಿಮ ಎಂಟರ ಕಾಳಗದಲ್ಲಿ ಉತ್ತಮ ಪ್ರದರ್ಶನ ತೋರಿದ ಸೋಫಿಯಾ ಜಾಕೋಬ್ಸನ್ (22ನೇ ನಿ.) ಹಾಗೂ ಸ್ಟಿನಾ ಬ್ಲಾಕ್‌ಸ್ಟೇನಿಯಸ್ (48ನೇ ನಿ.) ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಸ್ವಿಡೆನ್‌ 2-1 ಅಂತರದಲ್ಲಿ ಜರ್ಮನಿ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಟಿಕೆಟ್‌ ಪಡೆಯಿತು. ಇದರೊಂದಿಗೆ 24 ವರ್ಷಗಳ ಬಳಿಕ ಸ್ವಿಡೆನ್‌ ತಂಡ ಜರ್ಮನಿಯನ್ನು ಮಣಿಸಿದಂತಾಯಿತು. ಕೊನೆಯ ಬಾರಿ 1995ರಲ್ಲಿ ಸೋಲಿಸಿತ್ತು.
ಪಂದ್ಯದ ಆರಂಭದಲ್ಲೇ ಅತ್ಯುತ್ತಮವಾಗಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಜರ್ಮನಿ ಅಂದುಕೊಂಡಂತೆ ಬಹುಬೇಗ ಮುನ್ನಡೆ ಸಾಧಿಸಿತು. 16ನೇ ನಿಮಿಷದಲ್ಲಿ ಸಾರಾ ಡಬ್ರಿಟ್ಜ್ ನೀಡಿದ ಪಾಸ್‌ ಅನ್ನು ಸಮರ್ಥವಾಗಿ ಬಳಸಿಕೊಂಡ ಲೀನಾ ಮಾಗಲ್ ಸ್ವಿಡೆನ್‌ ರಕ್ಷಣಾ ಆಟಗಾರ್ತಿಯರನ್ನು ವಂಚಿಸಿ ಗೋಲು ಪಟ್ಟಿಗೆ ಚೆಂಡನ್ನು ಸೇರಿಸುವಲ್ಲಿ ಯಶಸ್ವಿಯಾದರು.
16ನೇ ನಿಮಿಷದಲ್ಲೇ 1-0 ಮುನ್ನಡೆ ಸಾಧಿಸಿದ ಸಂಭ್ರಮ ಜರ್ಮನಿ ತಂಡದಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ಇದಾದ ಕೇವಲ ಆರು ನಿಮಿಷಗಳ ಅಂತರದಲ್ಲಿ ಸ್ವಿಡೆನ್‌ ಸಮಬಲ ಸಾಧಿಸುತ್ತದೆ. 22ನೇ ನಿಮಿಷದಲ್ಲಿ
ಸೋಫಿಯಾ ಜಾಕೋಬ್ಸನ್ ಎದುರಾಳಿ ತಂಡದ ಗೋಲ್‌ಕೀಪರ್‌ ಅಲ್ಮುತ್‌ ಸ್ಕಲ್ಟ್‌ ಅವರನ್ನು ತಪ್ಪಿಸಿ ಸ್ವಿಡೆನ್‌ಗೆ ಗೋಲಿನ ಖಾತೆ ತೆರೆಯುತ್ತಾರೆ. ಇದರೊಂದಿಗೆ ಮೊದಲಾರ್ಧದ ಮುಕ್ತಾಯಕ್ಕೆ ಉಭಯ ತಂಡಗಳು 1-1 ಸಮಬಲ ಸಾಧಿಸುತ್ತವೆ.
ಎರಡನೇ ಅವಧಿಯಲ್ಲಿ ಕಣಕ್ಕೆ ಇಳಿದ ಉಭಯ ತಂಡಗಳ ನಡುವೆ ಭಾರಿ ಕಾದಾಟ ನಡೆಯುತ್ತದೆ. ಆದರೆ, ವಿಶ್ರಾಂತಿ ಬಳಿಕ ಅಂಗಳಕ್ಕೆ ಮರಳಿದ ಸ್ವಿಡೆನ್‌ ಕೇವಲ ನಾಲ್ಕು ನಿಮಿಷಗಳಲ್ಲಿ ಅಂದರೆ 48ನೇ ನಿಮಿಷದಲ್ಲಿ ಸ್ಟಿನಾ ಬ್ಲಾಕ್‌ಸ್ಟೇನಿಯಸ್ ಗಳಿಸಿದ ಗೋಲಿನ ನೆರವಿನಿಂದ 2-1 ಮುನ್ನಡೆ ಸಾಧಿಸುತ್ತದೆ. ಅಂತಿಮವಾಗಿ ಸ್ವಿಡೆನ್‌ 24 ವರ್ಷಗಳ ಬಳಿಕ ಜರ್ಮಿಯನ್ನು ಸೋಲಿಸಿತು.

loading...