ರೋಗಿಗಳಿಗೆ ಪೌಷ್ಟಿಕಾಂಶದ ಪದಾರ್ಥ ಸೇವಿಸಲು ಆರ್ಥಿಕ ನೆರವು: ದೀಪಾ ಚೋಳನ್

0
29

ಕನ್ನಡಮ್ಮ ಸುದ್ದಿ-ಧಾರವಾಡ: ಯಾವುದೇ ರೀತಿಯ ಕೆಮ್ಮು, ಜ್ವರ ಎರಡು ವಾರಕ್ಕಿಂತ ಅಧಿಕ ಅವಧಿ ಇದ್ದರೆ ಅದು ಕ್ಷಯರೋಗದ ಲಕ್ಷಣವಾಗಿರಬಹುದು , ಅದನ್ನು ನಿರ್ಲಕ್ಷಿಸದೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ,ಚಿಕಿತ್ಸೆ ಪಡೆದುಕೊಂಡರೆ ಸಂಪೂರ್ಣವಾಗಿ ಗುಣಪಡಿಸಬಹುದು.
ರೋಗಿಗಳಿಗೆ ಪೌಷ್ಟಿಕಾಂಶದ ಪದಾರ್ಥಗಳನ್ನು ಸೇವಿಸಲು ಆರ್ಥಿಕ ನೆರವನ್ನೂ ಕೂಡ ಸರ್ಕಾರ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ಷಯ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷಯರೋಗ ಗುಣಪಡಿಸಬಹುದಾದ ಖಾಯಿಲೆ. ರೋಗಿಗಳು ಎದೆಗುಂದಬೇಕಾಗಿಲ್ಲ.ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಇರುವ ನೇರ ನಿಗಾವಣೆ ಚಿಕಿತ್ಸೆ ಮೂಲಕ ನಿರಂತರವಾಗಿ ಆರು ತಿಂಗಳ ಕಾಲ ಔಷಧಿ ಸೇವಿಸಿದರೆ, ಶೇ.೧೦೦ ರಷ್ಟು ಖಾಯಿಲೆ ಗುಣಮುಖವಾಗುತ್ತದೆ.ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಪಾಲಕರಿಗೆ ಅರಿವು ಮೂಡಿಸಬೇಕು ಎಂದರು.ಕ್ಷಯರೋಗದಿಂದ ಗುಣಮುಖರಾದವರನ್ನು ಟಿಬಿ ಚಾಂಪಿಯನ್ ರೆಂದು ಕರೆಯಲಾಗುತ್ತದೆ ಎಂದರು. ರೋಗದಿಂದ ಸಂಪೂರ್ಣ ಗುಣಮುಖರಾದ ಅಶೋಕ, ನಿರ್ಮಲಾ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಕ್ಷಯರೋಗಕ್ಕೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ.ಪೌಷ್ಟಿಕ ಪದಾರ್ಥಗಳ ಬಳಕೆಗೆ ಆರ್ಥಿಕ ನೆರವೂ ಸಿಗುತ್ತಿದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ತನುಜಾ, ಡಾ.ಸುಜಾತಾ ಹಸವೀಮಠ,ಡಾ.ಶಿವಕುಮಾರ್ ಮಾನಕರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಇದ್ದರು.

loading...