ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಾಯಕರ ಸರ್ಕಸ್ ?

0
37

(ವಿಶೇಷ ವರದಿ :ರಾಚಪ್ಪ.ಸುತ್ತೂರು)

ಬೆಂಗಳೂರು:- ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದಿರುವ 13 ಶಾಸಕರು ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕವೂ ಸರ್ಕಾರ ಉಳಿಸಿಕೊಳ್ಳುವತ್ತ ಕಾಂಗ್ರೆಸ್ – ಜೆಡಿಎಸ್ ನಾಯಕರು ಗಂಭೀರ ಚಿಂತನೆ ನಡೆಸಿದ್ದು, ಅಗತ್ಯ ಬಿದ್ದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬದಲಾವಣೆಯಂತಹ ಕಠಿಣ ನಿರ್ಧಾರ ಅನಿವಾರ್ಯ ಎನ್ನುವ ನಿಲುವಿಗೆ ಬಂದಿದ್ದಾರೆ.
ಸರ್ಕಾರ ರಕ್ಷಣೆಗೆ ಹಲವು ಸೂತ್ರಗಳನ್ನು ಸಿದ್ಧಪಡಿಸಿದ್ದು, ಇದರಲ್ಲಿ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸುವುದು ಸೇರಿದೆ. ಸರ್ಕಾರ ಉಳಿಯಬೇಕಾದರೆ ಅತೃಪ್ತ ಶಾಸಕರ ಬೇಡಿಕೆಗಳಿಗೆ ಮನ್ನಣೆ ನೀಡುವುದು ಅನಿವಾರ್ಯ ಎಂಬುದನ್ನು ಮನಗಂಡಿದ್ದಾರೆ.
ದೆಹಲಿಯಿಂದ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ಸರಣಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು, ಮೈತ್ರಿ ಸರ್ಕಾರ ರಕ್ಷಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸುಧೀರ್ಘ ಸಮಾಲೋಚನೆ ನಡೆಸಿದರು.

ಇದಕ್ಕಾಗಿ ಮೈತ್ರಿ ನಾಯಕರು ಅರ್ಧ ಡಜನ್ ಸೂತ್ರಗಳನ್ನು ಸಿದ್ಧಪಡಿಸಿದ್ದಾರೆ.
1) ಮೈತ್ರಿ ಸರ್ಕಾರದ ನಾಯಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಬದಲಾವಣೆ ಮಾಡುವ ಮೂಲಕ ಸರ್ಕಾರದ ರಕ್ಷಣೆ.?
2) ಸಚಿವ ಸಂಪುಟ ಪುನಾರಚನೆ ಮೂಲಕ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಮನವೊಲಿಸುವುದು.
3) ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ಕಟ್ಟುವ ಮೂಲಕ ಬಂಡಾಯ ಶಮನಮಾಡುವುದು.
4) ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಎಲ್ಲಾ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರ ರೂಪಿಸುವುದು?
5) ಡಾ.ಜಿ.ಪರಮೇಶ್ವರ್ ಅವರಿಂದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿ ತಾತ್ಕಾಲಿಕ ಮೈತ್ರಿ ಸರ್ಕಾರ ರಕ್ಷಣೆ ಮಾಡುವುದು ?
6) ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಅಂತಿಮ ಅಸ್ತ್ರವಾಗಿ ಮೈತ್ರಿ ಸರ್ಕಾರವನ್ನು ವಿಸರ್ಜಿಸುವ ಮೂಲಕ ಮಧ್ಯಂತರ ಚುನಾವಣೆಗೆ ಹೋಗುವ ಬಗ್ಗೆಯೂ ಗಂಭೀರ ಸಮಾಲೋಚನೆ ನಡಸಿದ್ದಾರೆ.
ಮೇಲೆ ಉಲ್ಲೇಖಿಸಿದ 6 ಪ್ರಮುಖ ಅಂಶಗಳ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪ್ರತ್ಯೇಕವಾಗಿ ತಮ್ಮ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ಆಯ್ಕೆಗಳಲ್ಲಿ ಯಾವುದನ್ನು ಬಳಸಿ ಮೈತ್ರಿ ಸರ್ಕಾರ ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂಬ ಸಮಾಲೋಚನೆ, ಚರ್ಚೆ ನಡೆಸಲಾಗಿದೆ. ರಾಜೀನಾಮೆ ನೀಡಿದ ಶಾಸಕರ ಉದ್ದೇಶಗಳು, ಬೇಡಿಕೆಗಳನ್ನು ಪಟ್ಟಿಮಾಡಿ ಈಡೇರಿಸುವ ಮೂಲಕ ಸರ್ಕಾರ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಈ ನಾಯಕರದ್ದಾರೆ.
ಕ್ಷೇತ್ರದ ಅಭಿವೃದ್ಧಿ , ನಾಯಕರ ವರ್ತನೆ, ಅನುದಾನ ಹಂಚಿಕೆ ವಿಚಾರಕ್ಕೆ ರಾಜೀನಾಮೆ ನೀಡಿರುವ ಶಾಸಕರನ್ನು ಮನವೊಲಿಸಲು ಸಾಧ್ಯವಿದೆ. ಇದಕ್ಕಾಗಿ ಸೂಕ್ತ ಸಂಧಾನ ಸೂತ್ರ ರೂಪಿಸಬಹುದು ಎನ್ನುವ ನಿಲುವಿಗೆ ಬಂದಿದ್ದಾರೆ.
ಆದರೆ ರಾಜೀನಾಮೆ ನೀಡಿರುವ ಶಾಸಕರ ಬೇಡಿಕೆಯನ್ನು ಈಡೇರಿಸಲು ಎರಡೂ ಪಕ್ಷಗಳ ವರಿಷ್ಠರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಒಪ್ಪಿಗೆ ನೀಡಬೇಕು. ಶಾಸಕರ ಬೇಡಿಕೆಗಳಿಗೆ ಮೈತ್ರಿ ನಾಯಕರು ಒಪ್ಪಿಗೆ ಸೂಚಿಸಿದರೆ ಮತ್ತಷ್ಟು ಶಾಸಕರು ಅಧಿಕಾರ, ಸ್ಥಾನ ಮಾನಕ್ಕಾಗಿ ಬಂಡೇಳಲು ಅವಕಾಶ ಕಲ್ಪಿಸಿದಂತಾಗುತ್ತದೆ ಎಂಬ ಆತಂಕವೂ ಉಭಯ ನಾಯಕರಲ್ಲಿ ಮನೆ ಮಾಡಿದೆ.
ಎಲ್ಲಕ್ಕಿಂತ ಮುಖ್ಯಮಂತ್ರಿ ಬದಲಾವಣೆಗೆ ಪಕ್ಷಾತೀತವಾಗಿ ಶಾಸಕರು ಒತ್ತಾಯಿಸಿರುವ ಹಿನ್ನಲೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಬದಲಾವಣೆ ಮಾಡಬೇಕಾಗಬಹುದು ಎಂಬುದು ಈ ನಾಯಕರಿಗೆ ಮನವರಿಕೆಯಾಗಿದೆ.
ಕಾಂಗ್ರೆಸ್ ನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬದಲಾವಣೆಗೂ ಬಹುತೇಕ ಬೆಂಗಳೂರು ಶಾಸಕರು ಹಾಗೂ ಕಾಂಗ್ರೆಸ್ ಶಾಸಕರು ಒತ್ತಡ ಹೇರಿರುವ ಕಾರಣದಿಂದಾಗಿ ಅವರು ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ಬೇಡಿಕೆ ಪ್ರಬಲವಾಗಿ ಕೇಳಿ ಬಂದಿದೆ. ಆದರೆ ಇದಕ್ಕೆ ಜೆಡಿಎಸ್ ನಾಯಕರು ಅಡ್ಡಿಯಾಗಿದ್ದು, ಶಾಸಕರ ಆಸೆ ಈಡೇರುವ ಲಕ್ಷಣಗಳು ಕ್ಷೀಣಿಸಿದೆ. ಅವಕಾಶ ವಂಚಿತರಾಗುವ ಸಿದ್ದರಾಮಯ್ಯ ಆಪರೇಷನ್ ಕಮಲಕ್ಕೆ ಪರೋಕ್ಷವಾಗಿ ಬೆಂಬಲ ನೀಡಿ ಸರ್ಕಾರದ ಪತನಕ್ಕೆ ಕಾರಣರಾಗಬಹುದು ಎನ್ನುವ ಆತಂಕವೂ ಮನೆ ಮಾಡಿದೆ.
ಸಚಿವ ಸಂಪುಟ ಪುನಾರಚನೆ ಮಾಡಬೇಕು ಎಂಬುದು ಎಲ್ಲಾ ಅತೃಪ್ತ ಶಾಸಕರು ಒಕ್ಕೊರಲ ಅಭಿಪ್ರಾಯವಾಗಿದೆ. ಈ ಹಿನ್ನಲೆಯಲ್ಲಿ ಸಚಿವ ಸಂಪುಟ ಪುನಾರಚನೆ ಅನಿವಾರ್ಯ ಹಾಗೂ ಅಗತ್ಯವಾಗಿದೆ. ಇದೇ ಅತ್ಯಂತ ಸೂಕ್ತವಾದ ಮಾರ್ಗ ಎಂಬುದು ಎರಡೂ ಪಕ್ಷಗಳ ಪ್ರಮುಖ ನಾಯಕರಿಗೆ ಮನದಟ್ಟಾಗಿದೆ. ಹೀಗಾಗಿ ಕಾಂಗ್ರೆಸ್ ನಿಂದ ಹತ್ತು, ಜೆಡಿಎಸ್ ನಿಂದ ಐವರು ಸಚಿವರು ರಾಜೀನಾಮೆ ನೀಡಿ ಅತೃಪ್ತರಿಗೆ ಅವಕಾಶ ಮಾಡಿಕೊಡುವ ಬಗ್ಗೆಯೂ ಗಹನವಾದ ಚರ್ಚೆಗಳು ನಡೆದಿವೆ.
ಆಪರೇಷನ್ ಕಮಲಕ್ಕೆ ತಡೆಯೊಡ್ಡುವುದು ಹಾಗು ಶಾಸಕರ ರಾಜೀನಾಮೆ ಅಂಗೀಕರಿಸದಂತೆ ತಡೆಯುವುದು ಮೈತ್ರಿ ನಾಯಕರ ಮುಂದಿರುವ ಪ್ರಮುಖ ಆಯ್ಕೆಗಳಾಗಿವೆ. ಬಂಡಾಯ ಎದ್ದಿರುವ ಎಲ್ಲಾ ಶಾಸಕರು ಖುದ್ದಾಗಿ ಸಭಾಧ್ಯಕ್ಷರ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿರುವ ಕಾರಣ ರಾಜೀನಾಮೆ ಅಂಗೀಕರಿಸದೆ ಸ್ಪೀಕರ್ ಗೆ ಪರ್ಯಾಯ ಮಾರ್ಗಗಳಿಲ್ಲ. ಆದರೆ ಇನ್ನಷ್ಟು ಕಾಲಾವಕಾಶವನ್ನು ಅವರು ತೆಗೆದುಕೊಳ್ಳಲು ಅವರಿಗೆ ಅವಕಾಶವಿದೆ. ಹೀಗಾಗಿ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಪೂರ್ಣಗೊಳಿಸುವ ಮುನ್ನವೇ ಈ ಎಲ್ಲಾ ಆಯ್ಕೆಗಳನ್ನು ಶಾಸಕರ ಮುಂದಿಟ್ಟು ಅದಕ್ಕೆ ಅವರ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಮುಂದಿನ ಹೆಜ್ಜೆ ಇಡಲು ಸಹ ಉದ್ದೇಶಿಸಿದ್ದಾರೆ.

loading...