ಮುಖ್ಯಮಂತ್ರಿಯಿಂದ ಬಹುಮತ ಸಾಬೀತು ನಿಶ್ಚಿತ: ಸಾ ರಾ ಮಹೇಶ್

0
3

ಚಿಕ್ಕಬಳ್ಳಾಪುರ:- ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುತ್ತಾರೆ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್ ವಿಶ‍್ವಾಸ ವ್ಯಕ್ತಪಡಿಸಿದ್ದಾರೆ

ದೇವನಹಳ್ಳಿಯ ರೆಸಾರ್ಟ್‍ನಲ್ಲಿರುವ ಸಚಿವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ವ್ಯವಸ್ಥೆಯನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಸೋಮವಾರ ಅಧಿವೇಶನ ಇದೆ, ನಾವೆಲ್ಲರೂ ಒಟ್ಟಾಗಿ ಇರಬೇಕು ಎಂಬ ಉದ್ದೇಶದಿಂದ ರೆಸಾರ್ಟ್‍ಗೆ ಬಂದಿದ್ದೇವೆ. ಮೈತ್ರಿ ಪಕ್ಷಗಳ ನಾಯಕರು ಅತೃಪ್ತರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಹಿರಿಯ ನಾಯಕರಾದ ಮುರಳೀಧರ್ ರಾವ್ ಮತ್ತು ಶಾಸಕ ಕೆ.ಎಸ್. ಈಶ್ವರಪ್ಪ ಅವರ ಭೇಟಿ ಆಕಸ್ಮಿಕ. ಇದಕ್ಕೆ ರಾಜಕೀಯ ಲೇಪನ ಬೇಡ. ಕೆಎಸ್‍ಟಿಡಿಸಿ ವ್ಯಾಪ್ತಿಯ ಕಟ್ಟಡದಲ್ಲಿ ಅನೇಕ ನಾಯಕರು ಬರುತ್ತಾರೆ. ನಾನು ಅಲ್ಲಿಗೆ ಹೋದ ಸಂದರ್ಭದಲ್ಲಿ ಬಿಜೆಪಿ ನಾಯಕರು ಅಲ್ಲಿದ್ದರು. ಅನೌಪಚಾರಿಕವಾಗಿ ಅಲ್ಲಿ ಮಾತನಾಡಿದೆ ಎಂದು ಸ್ಪಷ್ಟಪಡಿಸಿದರು.
ಅತೃಪ್ತ ಶಾಸಕರು ತಾವು ಇನ್ನೂ ಗೆದ್ದ ಪಕ್ಷದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ವಿಶ್ವಾಸಮತ ನಿರ್ಣಯದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರವಣಬೆಳಗೋಳ ಶಾಸಕ ಬಾಲಕೃಷ್ಣ ಮಾತನಾಡಿ, ಮೋಜು ಮಸ್ತಿಗಾಗಿ ನಾವು ರೆಸಾರ್ಟ್‌ಗೆ ಬಂದಿಲ್ಲ. ಬಿಜೆಪಿಯವರು ಅಪರೇಷನ್ ಕಮಲ ಶುರು ಮಾಡಿದ್ದಾರೆ. 14 ತಿಂಗಳು ಮೈತ್ರಿ ಸರ್ಕಾರ ಆಡಳಿತ ಯಶಸ್ವಿಯಾಗಿದೆ. ಎರಡು ಪಕ್ಷಗಳ ಶಾಸಕರು ರಾಜಿನಾಮೆಯಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಒಂದು ಪಕ್ಷದ ಚಿಹ್ನೆಯಿಂದ ಗೆದ್ದು ರಾಜಿನಾಮೆ ನೀಡಿರುವುದು ಖಂಡನೀಯ ಎಂದರು.
ಕ್ಷೇತ್ರದ ಜವಾಬ್ದಾರಿ ಮರೆತು ಶಾಸಕರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ರಾಜೀನಾಮೆ ನೀಡಿದ್ದಾರೆ. ಶಾಸಕರ ಈ ನಡೆ ಖಂಡನೀಯ. ಅತೃಪ್ತರನ್ನು ವಿಶ್ವಾಸದಿಂದ ಕರೆತರಲು ಮುಂಬೈಗೆ ತೆರಳಿದಾಗ ಸೌಜನ್ಯಕ್ಕೂ ಸಹ ನಮಗೆ ಹೋಟೆಲ್‌ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ ಎಂದರು.

ಎಲ್ಲಾ ಇಲಾಖೆಗಳಲ್ಲೂ ಎಚ್‍.ಡಿ. ರೇವಣ್ಣ ಹಸ್ತಕ್ಷೇಪ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ಮಾಡಬೇಕೆನ್ನುವುದು ರೇವಣ್ಣನವರ ನಿಲುವು. ಎಲ್ಲಾ ಇಲಾಖೆಯ ಸಚಿವರು ಮುಕ್ತ ಚರ್ಚೆ ಮಾಡಿ ಸರಿಪಡಿಸಿಕೊಳ್ಳಬೇಕಿದೆ ಎಂದು ಉತ್ತರಿಸಿದರು.

loading...