ಮಾನವನ ಅತಿಯಾದ ಆಶೆಯೇ ದುಃಖಕ್ಕೆ ಕಾರಣ

0
27

ಆಲಮಟ್ಟಿ: ಸಮೀಪದ ಚಿಮ್ಮಲಗಿ ಪು.ಕೇ.ಭಾಗ-೨ರಲ್ಲಿರುವ ಅರಳೆಲೆ ಕಟ್ಟಿಮನಿ ಹಿರೇಮಠದ ಜಾತ್ರಾ ಮಹೋತ್ಸವದಂಗವಾಗಿ ಇಟಗಿಯ ಮೇಲುಗದ್ದುಗೆ ಮಠದ ಗುರುಶಾಂತವೀರ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಉತ್ಸವ, ಧರ್ಮಸಭೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಮೂಹಿಕ ವಿವಾಹಗಳು ನಡೆದವು.
ಚಿಮ್ಮಲಗಿಯ ಅರಳೆಲೆ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ತಪೋನಿಧಿ ನೀಲಕಂಠ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಇಟಗಿಯ ಮೇಲುಗದ್ದುಗೆ ಮಠದ ಗುರುಶಾಂತವೀರ ಸ್ವಾಮೀಜಿಯವರು ಅಡ್ಡಪಲ್ಲಕ್ಕಿಯ ಸೇವೆಯನ್ನು ಪಡೆದು ನಂತರ ಸಾಮೂಹಿಕ ವಿವಾಹಸಮಾರಂಭದಲ್ಲಿ ಮಾತನಾಡಿ, ಸೊಸೆಯು ತನ್ನ ಅತ್ತೆ ಮಾವಂದಿರನ್ನು ತನ್ನ ಹೆತ್ತ ತಂದೆ ತಾಯಿಯರಂತೆ ಹಾಗೂ ಅತೆ ಮಾವಂದಿರು ಸೊಸೆಯನ್ನು ತನ್ನ ಮಗಳಂತೆ ಕಂಡರೆ ಆ ಕುಟುಂಬದಲ್ಲಿ ಶಾಂತಿ, ನೆಮ್ಮದಿ, ಸಂಪತ್ತು ನೆಲೆಸುತ್ತದೆ ಎಂದರು.
ಮಾನವನ ಅತಿಯಾದ ಆಶೆಯೇ ದುಃಖಕ್ಕೆ ಕಾರಣವಾಗುತ್ತದೆ ಅಲ್ಲದೇ ಸಮಾಜದಲ್ಲಿ ಒಬ್ಬರ ಮೇಲೊಬ್ಬರು ವಿಶ್ವಾಸವನ್ನಿಟ್ಟುಕೊಂಡು ನಾವೆಲ್ಲ ಒಂದು ಎನ್ನುವ ಭಾವದಿಂದ ಪ್ರತಿಯೊಬ್ಬರು ಅರಿತು ನಡೆದರೆ ಅಲ್ಲಿ ಸಾಮರಸ್ಯ ಉಂಟಾಗುತ್ತದೆ ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದರು.
ನಾಲ್ಕು ಜೊತೆ ಸಾಮೂಹಿಕ ವಿವಾಹಗಳು ಜರುಗಿದವು. ಇದಕ್ಕೂ ಮುಂಚೆ ಎಲ್ಲ ಸ್ವಾಮೀಜಿಗಳನ್ನು ವಿವಿಧ ವಾದ್ಯವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಲಮೇಲದ ಚಂದ್ರಶೇಖರ ಸ್ವಾಮೀಜಿ,
ತಡವಲಗಾದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಡೋಣೂರಿನ ಸಿದ್ದಲಿಂಗಸ್ವಾಮೀಜಿ, ಕಟ್ಟಿಮನಿ ಹಿರೇಮಠದ ಸಿದ್ದರೇಣುಕ ದೇವರು, ಎಸ್.ಎಸ್.ನಿಜಪ್ಪನವರ, ಬಸನಗೌಡ ನರಸನಗೌಡರ, ಮಲ್ಲನಗೌಡ ನರಸನಗೌಡರ, ರಮೇಶ ಪಟ್ಟಣಶೆಟ್ಟಿ,ಬಾಬು ವಾಲಿಕಾರ, ಬಸವರಾಜ ಬಾದರದಿನ್ನಿ, ಗುರುಸಿದ್ದ ಕಾಮನಕೇರಿ, ಶಿದ್ದು ಪಾಟೀಲ, ಶಿವಾನಂದ ಗದಿಗೆಪ್ಪಗೌಡರ ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ರಾಮುಜಗತಾಪ ಸ್ವಾಗತಿಸಿದರು. ಆಹಾಂಗೀರ ಮಕಾನದಾರ ನಿರೂಪಿಸಿದರು. ಶರಣು ಪಟ್ಟಣಶೆಟ್ಟಿ ವಂದಿಸಿದರು.

loading...