ಮುಂದುವರೆದ ಬಿಜೆಪಿ ಧರಣಿ : ಮೇಲ್ಮನೆ ಕಲಾಪ ಶುಕ್ರವಾರಕ್ಕೆ ಮುಂದೂಡಿಕೆ

0
12

ಬೆಂಗಳೂರು: ರಾಜ್ಯ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ  ಎಚ್‌.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ  ಪರಿಷತ್‌ನಲ್ಲಿ ಇಂದು ಕೂಡ ಬಿಜೆಪಿ ಧರಣಿ ಮುಂದುವರೆಸಿದ್ದರಿಂದ ಮೇಲ್ಮನೆ ಕಲಾಪವನ್ನು  ದಿನದ ಮಟ್ಟಿಗೆ ಮುಂದೂಡಲಾಯಿತು.
ಕಳೆದ ಮೂರು ದಿನಗಳಿಂದ  ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸದಸ್ಯರು  ನಡೆಸುತ್ತಿರುವ ಪ್ರತಿಭಟನೆ ಗುರುವಾರವೂ ಮುಂದುವರೆಯಿತು. ಬೆಳಿಗ್ಗೆ ಸದನ  ಸಮಾವೇಶಗೊಳ್ಳುತ್ತಿದ್ದಂತೆ ಸಭಾಪತಿ ಪೀಠದ ಮುಂಭಾಗ ಜಮಾಯಿಸಿದ ಪ್ರತಿಪಕ್ಷ ಸದಸ್ಯರು  ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಬಿತ್ತಿಪತ್ರ ಪ್ರದರ್ಶಿಸಿದರು.
ಬಹುಮತವಿಲ್ಲದ  ಸರ್ಕಾರವನ್ನು ನಡೆಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೈತಿಕತೆಯಿಲ್ಲ. ಹೀಗಾಗಿ  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಧರಣಿ ನಿರತರು ಆಗ್ರಹಿಸಿದ ಕಾರಣ  ಸದನದಲ್ಲಿ ಗದ್ದಲ, ಗಲಾಟೆ ಉಂಟಾಯಿತು.  ಈ ಸಂದರ್ಭದಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ಮಧ್ಯಾಹ್ನ 3.30 ಕ್ಕೆ ಮುಂದೂಡಿದರು.
ಮತ್ತೆ  ಸದನ ಸಮಾವೇಶಗೊಂಡಾಗಲೂ ಬಿಜೆಪಿ ತನ್ನ ಪಟ್ಟು ಮುಂದುವರಿಸಿದ ಪರಿಣಾಮ ಮತ್ತೊಮ್ಮೆ  ಕಲಾಪವನ್ನು ಸಂಜೆ 5.30 ಕ್ಕೆ ಮುಂದೂಡಲಾಯಿತು. ನಂತರವೂ ಸದನದಲ್ಲಿ ಇದೇ ಸ್ಥಿತಿ  ಮುಂದುವರೆದಾಗ ಸಭಾಪತಿ ಕಲಾಪವನ್ನು ಶುಕ್ರವಾರ ಮಧ್ಯಾಹ್ನ 12 ಕ್ಕೆ ಮುಂದೂಡಿದರು.

loading...