ಐಸಿಜೆ ತೀರ್ಪು ಭಾರತದ ಪರವಾಗಿದೆ; ಅದರಲ್ಲಿ ಗೊಂದಲವಿಲ್ಲ; ವಿದೇಶಾಂಗ ಸಚಿವಾಲಯ

0
14

ನವದೆಹಲಿ- ಗೂಢಚಾರಿಕೆ ಹಾಗೂ ಭಯೋತ್ಪಾದನೆಯ ಆರೋಪದ ಮೇಲೆ ಪಾಕಿಸ್ತಾನದ ಸೆರೆಯಲ್ಲಿರುವ ಭಾರತೀಯ ನೌಕಾಪಡೆಯ ನಿವೃತ್ತ ಯೋಧ ಕುಲಭೂಷಣ್ ಜಾಧವ್ ಪ್ರಕರಣ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಭಾರತದ ಪರವಾಗಿದ್ದು, ಅದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ತೀರ್ಪನ್ನು ಬೇರೆಯೇ ರೀತಿ ಬಿಂಬಿಸುತ್ತಿದೆ ಎಂದಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನ ಬೇರೆ ಯಾವುದೋ ತೀರ್ಪನ್ನು ಓದುತ್ತಿರಬೇಕು. ಮುಖ್ಯವಾದ ತೀರ್ಪು , ತೀರ್ಪಿನ ಪ್ರತಿಯ 42ನೇ ಪುಟದಲ್ಲಿದೆ. ಪಾಕಿಸ್ತಾನಕ್ಕೆ 42 ನೇ ಪುಟವನ್ನು ಹುಡುಕಿ ಓದುವ ತಾಳ್ಮೆಯಿರದಿದ್ದರೆ, ಅವರು 7 ಪುಟಗಳ ಪತ್ರಿಕಾ ಪ್ರಕಟಣೆಯನ್ನು ಓದಲಿ. ಅದರಲ್ಲಿ ಪ್ರತಿಯೊಂದು ವಾಕ್ಯವೂ ಭಾರತದ ಪರವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನ್ಯಾಯಾಲಯದ ತೀರ್ಪು ಭಾರತದ ನಿಲುವನ್ನು ಸಮರ್ಥಿಸಿದೆ ಎಂದ ಅವರು, ಪಾಕಿಸ್ತಾನಕ್ಕೆ ವಿಯೆನ್ನಾ ಒಪ್ಪಂದದ ಅನುಸಾರ ನಡೆದುಕೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಾಕಿಸ್ತಾನ ತಕ್ಷಣ ಕ್ರಮ ಕೈಗೊಳ್ಳಬೇಕು. ನಾವು ಅದಕ್ಕಾಗಿ ಕಾಯುತ್ತಿದ್ದೇವೆ ಎಂದರು.
ಪಾಕಿಸ್ತಾನದಲ್ಲಿ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಜೆಯುಡಿ ಮುಖ್ಯಸ್ಥನ ಬಂಧನ ಹಾಗೂ ಬಿಡುಗಡೆ ಪ್ರಕ್ರಿಯೆ ಹಲವು ಕಾಲದಿಂದ ನಡೆಯುತ್ತಿದೆ. ಈಗಾಗಲೇ 8 ಬಾರಿ ಈ ನಾಟಕ ನಡೆದಿದೆ. ಆದರೆ, ಈ ಬಾರಿ ಹಫೀಜ್ ಸಯೀದ್ ವಿಚಾರಣೆ ನಡೆಸಿ, ಭಯೋತ್ಪಾದನಾ ಚಟುವಟಿಕೆಗಳಿಗೆ ಶಿಕ್ಷೆ ವಿಧಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿ ನ್ಯಾಯ ಸಿಗುತ್ತದೆ ಎಂಬ ಆಶಾವಾದ ಇರಿಸಿಕೊಂಡಿದ್ದೇವೆ ಎಂದರು.
ಗುರುವಾರ ದಿ ಹೇಗ್ ನ ಅಂತಾರಾಷ್ಟ್ರೀಯ ನ್ಯಾಯಾಲಯ, ಬುಧವಾರ ಕುಲಭೂಷಣ್ ಜಾಧವ್ ವಿರುದ್ಧ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಅಮಾನತಿನಲ್ಲಿರಿಸಿ, ಮತ್ತೊಮ್ಮೆ ನಿಯಮಬದ್ಧವಾಗಿ ವಿಚಾರಣೆ ನಡೆಸುವಂತೆ ಪಾಕಿಸ್ತಾನಕ್ಕೆ ಸೂಚಿಸಿತ್ತು.

loading...