ವಿಶ್ವಾಸಮತ ಯಾಚನೆ ಚರ್ಚೆ ಸೋಮವಾರದವರೆಗೆ ಮುಂದುವರೆಯಬಹುದು: ರಾಜ್ಯಪಾಲರಿಗೆ ಗಡುವು ನೀಡಲು ಅಧಿಕಾರವಿಲ್ಲ – ಸಿದ್ದರಾಮಯ್ಯ

0
11

ಬೆಂಗಳೂರು:-ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಮಂಡಿಸಿರುವ ವಿಶ್ವಾಸಮತ ಯಾಚನೆ ಬಗ್ಗೆ ನಡೆಯುತ್ತಿರುವ ಸೋಮವಾರದ ವರೆಗೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಅಧಿವೇಶನವನ್ನು ಇಂತಿಷ್ಟೇ ಸಮಯಕ್ಕೆ ಮುಗಿಸಬೇಕು ಎಂದು ಆದೇಶ ನೀಡಲು ರಾಜ್ಯಪಾಲರಿಗೆ ಅಧಿಕಾರವಿಲ್ಲ ಎಂದು ಸಹ ಹೇಳಿದ್ದಾರೆ.
ವಿಧಾನಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಪಾಲರು ಮಧ್ಯಾಹ್ನ 1.30ರ ಒಳಗಾಗಿ ವಿಶ್ವಾಸ ಮತ ಯಾಚನೆ ಕಲಾಪ ಮುಗಿಸುವಂತೆ ಮುಖ್ಯಮಂತ್ರಿ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಲ್ಲಿ ಸ್ಪೀಕರ್ ಅವರೇ ಸುಪ್ರೀಂ. ವಿಶ್ವಾಸಮತ ಯಾಚನೆ ಗೊತ್ತುವಳಿ ಈಗ ಸದನದ ಸೊತ್ತಾಗಿದೆ. ಹೀಗಾಗಿ ಎಷ್ಟು ಸಮಯ ಬೇಕಾದರೂ ಚರ್ಚೆ ನಡೆಯಬಹುದು. ಬಹುತೇಕ ಇಂದು ಕಲಾಪ ಮುಕ್ತಾಯವಾಗುವ ಸಾಧ್ಯತೆಗಳು ಕಡಿಮೆ ಎಂದರು.
ರಾಜ್ಯಪಾಲರಿಗೆ ಅಧಿವೇಶನದ ಬಗ್ಗೆ ಯಾವುದೇ ಸೂಚನೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸಚಿವ ಕೃಷ್ಣಭೈರೇಗೌಡ ಅರುಣಾಚಲ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳ ಉದಾಹರಣೆಗಳನ್ನು ಸಮರ್ಥವಾಗಿ ನೀಡಿ, ರಾಜ್ಯಪಾಲರು ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದರು.
ಬಿಜೆಪಿ ನಾಯಕರು ಆಪರೇಷನ್ ಕಮಲ ಕಾರ್ಯಾಚರಣೆ ನಡೆಸಲು ಕೋಟ್ಯಂತರ ರೂ ಹಣ ವೆಚ್ಚ ಮಾಡುತ್ತಿದ್ದಾರೆ. ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರ ಮನೆಗೆ ಹಣ ಕಳುಹಿಸಿದ್ದರು. ಇದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ. ಬಿಜೆಪಿ ನಾಯಕರು ಹಣ ಕೊಟ್ಟಿರುವುದನ್ನು ನಿರಾಕರಿಸಿಲ್ಲ. ಬಿಜೆಪಿ ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸಿದೆ ಎಂದು ಆರೋಪಿಸಿದರು.
ವಿಪ್ ಕುರಿತು ತಾವು ಎತ್ತಿದ ಕ್ರಿಯಾಲೋಪದ ಬಗ್ಗೆ ಸ್ಪೀಕರ್ ಅವರು ಇನ್ನೂ ರೂಲಿಂಗ್ ನೀಡಿಲ್ಲ. ತಮ್ಮ ಕ್ರಿಯಾ ಲೋಪಕ್ಕೆ ಮೊದಲು ರೂಲಿಂಗ್ ನೀಡಬೇಕು ಎಂದು ಸಿದ್ದರಾಮಯ್ಯ ಸಭಾಧ್ಯಕ್ಷರನ್ನು ಒತ್ತಾಯಿಸಿದರು.

loading...