ಬಾವಿ ಶುಚಿಗೊಳಿಸಲು ವಿನಾಯಕ ವೃಂದದ ಯುವಕರ ಸಹಕಾರ

0
33

ಕನ್ನಡಮ್ಮ ಸುದ್ದಿ-ಧಾರವಾಡ: ಹೊಸಯಲ್ಲಾಪುರದ ಐತಿಹಾಸಿಕ ನುಚ್ಚಂಬಲಿ ಬಾವಿಯನ್ನು ಶುಚಿಗೊಳಿಸಲು ಮಹಾನಗರಪಾಲಿಕೆಯೊಂದಿಗೆ ಕೈಜೋಡಿಸಿರುವ ಸ್ಥಳೀಯ ವಿನಾಯಕ ವೃಂದದ ಯುವಕರ ಕಾರ್ಯವನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಶ್ಲಾಘಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಯುವಕರೊಂದಿಗೆ ಚರ್ಚಿಸಿದ ಅವರು, ಸುಮಾರು ೭೦ಅಡಿಗಳಿಗೂ ಹೆಚ್ಚು ಆಳವಿರುವ ನುಚ್ಚಂಬಲಿ ಬಾವಿಯು ಹಲವು ದಶಕಗಳ ಹಿಂದೆ ಧಾರವಾಡ ನಗರಕ್ಕೆ ನೀರು ಒದಗಿಸುವ ಪ್ರಮುಖ ಜಲಮೂಲವಾಗಿತ್ತು. ಗಣೇಶೋತ್ಸವ, ಮೋಹರಂ, ನವರಾತ್ರಿ ದುರ್ಗಾದೇವಿ ವಿಗ್ರಹಗಳು, ಪೂಜಾ ಸಾಮಗ್ರಿಗಳ ವಿಸರ್ಜನೆ ಕಾರ್ಯದಿಂದ ಬಾವಿ ಮಲಿನವಾಗುವುದನ್ನು ತಡೆಯಲು ಸ್ಥಳೀಯ ವಿನಾಯಕ ಯುವಕ ವೃಂದದ ಗೆಳೆಯರು ಈಗ್ಗೆ ನಾಲ್ಕು ತಿಂಗಳ ಹಿಂದೆ ಬಾವಿಯನ್ನು ಶುಚಿಗೊಳಿಸಲು ಪಾಲಿಕೆಗೆ ಸಹಕಾರ ನೀಡಿದ್ದಾರೆ.

ವಾರಕ್ಕೊಮ್ಮೆ ಸುಣ್ಣ ಬಳಿಯುತ್ತಿದ್ದಾರೆ. ಮಹಾನಗರ ಪಾಲಿಕೆ ಪೂರೈಸುವ ಬ್ಲೀಚಿಂಗ್ ಪೌಡರ್ ಹಾಕಿ ನೀರಿನ ಗುಣಮಟ್ಟ ಕಾಪಾಡಲು ಒತ್ತು ನೀಡುತ್ತಿರುವ ಕುರಿತು ಮಾಹಿತಿ ಪಡೆದರು. ಸಾರ್ವಜನಿಕರೇ ಜಾಗೃತರಾಗಿ ನಮ್ಮ ಕೆರೆ,ಬಾವಿ ಮತ್ತಿತರ ಜಲಮೂಲಗಳನ್ನು ಸಂರಕ್ಷಿಸಿಕೊಳ್ಳಲು ಈ ರೀತಿ ಮುಂದಾಗಬೇಕು ಎಂದು ಸಂತಸ ವ್ಯಕ್ತಪಡಿಸಿದರು. ನಾಗರಾಜ ಹಳಕಟ್ಟಿ, ಸಂತೋಷ ಪಾಟೀಲ, ರಾಮಚಂದ್ರ ಜಗಾಂವಕರ್, ಅನೀಲ ಹಳಕಟ್ಟಿ, ಬಾಬು ಮಂಗಳಗಟ್ಟಿ, ವಿನೋದ ಜಾಧವ, ವಿರೇಶ ಮಠಪತಿ ಇದ್ದರು.

loading...