ಸಿದ್ದಾರ್ಥ್ ಗೆ ಕಷ್ಟ ಎದುರಿಸುವ ಶಕ್ತಿ ಇತ್ತು : ಡಿಕೆಶಿ

0
16

ಬೆಂಗಳೂರು:-ಉದ್ಯಮಿ ಸಿದ್ದಾರ್ಥ್ ಗೆ ಕಷ್ಟವನ್ನು ಎದುರಿಸುವ ಶಕ್ತಿ ಇತ್ತು ಅವರು ಯಾವುದಕ್ಕೂ ಆಸೆ ಪಡದ ಸರಳವ್ಯಕ್ತಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ

ಎಸ್‍.ಎಂ.ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ್ ಹೀಗೆ ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂಬುದನ್ನು ತಮ್ಮಿಂದ ನಂಬಲು ಸಾಧ್ಯವಾಗುತ್ತಿಲ್ಲ. ಸಿದ್ದಾರ್ಥ್ ಒಬ್ಬ ವ್ಯಕ್ತಿಯಲ್ಲ. ಅವರು ರಾಜ್ಯದ 50 ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದ ದೊಡ್ಡ ಉದ್ಯಮಿಯಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದಾರ್ಥ್ ನೇತ್ರಾವತಿ ನದಿಯ ಬಳಿಯಲ್ಲಿಯೇ ಕಾಣೆಯಾಗಿರುವುದರ ಹಿನ್ನೆಲೆ ಏನು? ಅವರನ್ನು ಯಾರಾದರೂ ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಸಿದ್ದಾರ್ಥ್ ಜು 28 ರಂದು ಕರೆ ಮಾಡಿ, ತಮ್ಮನ್ನು ಭೇಟಿಯಾಗಬೇಕೆಂದು ಹೇಳಿದ್ದರು. ಅವರು ಕರೆ ಮಾಡಿದ್ದಾಗ ತಾವು ಕಂಚಿಯಲ್ಲಿದ್ದಿದ್ದರಿಂದ ಸಂಜೆ ಅಥವಾ ಸೋಮವಾರ ಭೇಟಿಯಾಗುವುದಾಗಿ ಹೇಳಿದ್ದೆ. ಸರ್ಕಾರ ಅವರನ್ನು ಹುಡುಕುವ ಎಲ್ಲಾ ಪ್ರಯತ್ನ ಮಾಡುತ್ತಿದ್ದು, ಉಳಿದಿದ್ದು ಭಗವಂತನಿಗೆ ಬಿಟ್ಟದ್ದು ಎಂದರು.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಡಿ.ಕೆ.ಶಿವಕುಮಾರ್, ಸಿದ್ದಾರ್ಥ್ ಕುಟುಂಬದೊಂದಿಗೆ ದಶಕಗಳಿಂದ ತಮಗೆ ನಿಕಟ ಸಂಬಂಧವಿದೆ. ಅವರ ನಿಗೂಢ ಕಣ್ಮರೆ ಪ್ರಕರಣದಲ್ಲಿ ಉನ್ನತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು.

loading...