ಐಟಿ ಮತ್ತು ಇಡಿಯಿಂದ ತೊಂದರೆಯಾಗಿದೆ ಎಂಬ ಮಾಹಿತಿ ಇದೆ : ಸಿದ್ದರಾಮಯ್ಯ

0
17

ಬೆಂಗಳೂರು:-ಉದ್ಯಮಿ ವಿಜಿ ಸಿದ್ದಾರ್ಥ ಕಾಣೆಯಾಗಿದ್ದಾರೆ ಅಥವಾ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಪತ್ರ ಬರೆದಿರುವುದನ್ನು ನೋಡಿದರೆ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯಗಳು ಬಂದಿದೆ.ಐಟಿ ಮತ್ತು ಇಡಿಯ ಕಿರುಕುಳ ನೀಡಿದ್ದರೆಂಬ ಆರೋಪವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಫೆ ಕಾಫಿ ಡೇ ಸಂಸ್ಥೆ ಸಂಸ್ಥಾಪಕ ವಿ ಜಿ ಸಿದ್ದಾರ್ಥ್ ಕಾಣೆಯಾಗಿರುವುದು ಇನ್ನೂ ಸ್ಪಷ್ಟವಾಗಿಲ್ಲ ಎಲ್ಲವೂ ಗಾಳಿ ಸುದ್ದಿ ರೀತಿಯಲ್ಲಿದೆ.ಅವರು ಕಾಣೆಯಾಗಿದ್ದಾರೋ ಅಥವಾ ಆತ್ಮಹತ್ಯೆ ಮಾಡ್ಕೊಂಡಿದ್ದಾರೋ ಎಂಬುದು ಇನ್ನೂ ಖಚಿತವಾಗಿಲ್ಲ.

ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ಬಂದಿದೆ. ಆದರೆ, ಸಿದ್ದಾರ್ಥ್ ಅಂತಹ ವ್ಯಕ್ತಿಯಲ್ಲ. ಸಭ್ಯ ,ಸುಸಂಸ್ಕೃತ ವ್ಯಕ್ತಿ ,ಪ್ರಚಾರ ಬಯಸುತ್ತಿದ್ದವರಲ್ಲ.ದೇಶ ,ವಿದೇಶದಲ್ಲಿ ಕಾಫಿ ಡೇ ರೆಸ್ಟೋರೆಂಟ್ ಪ್ರಾರಂಭಿಸಿದರು. ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದಾತನಿಗೆ ಇಂತಹ ಪರಿಸ್ಥಿತಿ ಒದಗಿ ಬಂದಿರುವುದು ದುರ್ದೈವದ ಸಂಗತಿ ಬೇಸರ ವ್ಯಕ್ತಪಡಿಸಿದರು.
ಆದಾಯ ತೆರಿಗೆ ಇಲಾಖೆಯವರು ಕಿರುಕುಳ ನೀಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಮಾನಸಿಕ ಒತ್ತಡಕ್ಕೆ ಒಳಗಾಗಿ,ಸ್ಥಿಮಿತ ಕಳೆದುಕೊಂಡಿದ್ದಾರೆ. ಸಿದ್ಧಾರ್ಥ್ ಗೂ ಐಟಿ, ಇಡಿಯಿಂದ ಕಿರುಕುಳ ಒಳಗಾಗಿರಬಹುದು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ವಿ ಜಿ ಸಿದ್ದಾರ್ಥ್ ನಮ್ಮೆಲ್ಲರಿಗೂ, ಚಿರಪರಿಚಿತ ವ್ಯಕ್ತಿ, ರಾಜ್ಯದ ಬಹು ದೊಡ್ಡ ಉದ್ದಿಮೆದಾರ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ,ಹಾಗು ವಿಚಾರಣೆ ನೆಪದಲ್ಲಿ ತೊಂದರೆ ನೀಡಿದ್ದರು ಎಂದು ಪತ್ರದಲ್ಲಿ ಬರೆದಿದ್ದಾರೆ ಎಂಬ ಮಾಹಿತಿ ಇದೆ. ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದು ತನಿಖೆಯಿಂದಲೇ ಪತ್ತೆಹಚ್ಚಬೇಕಿದೆ.

ವಿಜಿ ಸಿದ್ದಾರ್ಥ್ ಸರಳ ವ್ಯಕ್ತಿತ್ವ ಹೊಂದಿದ್ದವರು ,ಅವರು ಹುಷಾರಾಗಿ ವಾಪಸ್ಸು ಬರಲಿ
ನಮ್ಮ ಕರ್ನಾಟಕದ ಮಣ್ಣಿನ ಮಗನಿಗೆ ಯಾವುದೇ ತೊಂದರೆಯಾಗದಿರಲಿ ಎಂದು ದಿನೇಶ್ ಗುಂಡೂರಾವ್ ಆಶಿಸಿದ್ದಾರೆ.

loading...