ಅಭಿಮಾನ ಮೆರೆದ ರಾಯಣ್ಣ ಹುಡುಗರು

0
252

ರಾಯಣ್ಣ ಜನುಮ ದಿನದ ನಿಮಿತ್ತ ವಿಶೇಷ ಪೂಜೆ ! ಸಿಹಿ ಹಂಚಿ ಸಂಭ್ರಮ

ಬೆಳಗಾವಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಜನುಮ ದಿನದ ನಿಮಿತ್ತವಾಗಿ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಂಕಾಪುರ ಗ್ರಾಮದ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು‌ ಪುಣ್ಯ ಭೂಮಿ ನಂದಗಡದಲ್ಲಿ  ಅ.15ರಂದು ರಾಯಣ್ಣ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ವೂ ಸಂಗೊಳ್ಳಿ ರಾಯಣ್ಣ ಅಭಿಮಾನಿ ಸಂಘದ ಯುವಕರು ಹಾವೇರಿ ಜಿಲ್ಲೆಯಿಂದ ತಂಡೋಪ ತಂಡವಾಗಿ ಆಗಮಿಸಿ ಕಿತ್ತೂರ ಗ್ರಾಮದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಪೂಜೆ ಸಲ್ಲಿಸಿದರು.

ಬಳಿಕ ರಾಯಣ್ಣನ ಶೌರ್ಯ ಮುಂದಿನ ಯುವ ಜನಾಂಗಕ್ಕೆ ತಿಳಿಯಬೇಕೆಂದು ಕತ್ತಿ ಚನ್ನಬಸವಣ್ಣನು ರಾಯಣ್ಣ ಸಮಾಧಿಯ ಮೇಲೆ ನೆಟ್ಟ ಆಲದ ಮರವು ಬೃಹದಾಕಾರ ವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಪುಣ್ಯ ಸ್ಥಳವಾಗಿರುವ ನಂದಗಡಕ್ಕೆ ಆಗಮಿಸಿ ಸಂಗೊಳ್ಳಿ ರಾಯಣ್ಣನ ಪತ್ಥಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ
ವಿಶೇಷ ಪೂಜೆ ಸಲ್ಲಿಸಿ, ಗ್ರಾಮದ ಜನರಿಗೆ ಸಿಹಿ ಹಂಚಿದರು.

ಇದೇ ವೇಳೆ ಸಂಘಟನೆಯ ಮುಖಂಡರು ಮಾತನಾಡಿ, ಸಂಗೊಳ್ಳಿ ರಾಯಣ್ಣನ ಶೌರ್ಯ, ಪ್ರಾಮಾಣಿಕತೆ ಹಾಗೂ ನಿಷ್ಠೆ ಇಂದಿನ ಯುವಕರಿಗೆ ಮಾದರಿಯಾಗಿದೆ. ಸಂಗೊಳ್ಳಿ ರಾಯಣ್ಣನ ಹೆಸರು ಕೇಳಿದರೆ ಸಾಕು ಮೈಯಲ್ಲಿ ದೇಶಭಕ್ತಿಯ ರಕ್ತ ಪುಟಿದೇಳುತ್ತದೆ. ರಾಯಣ್ಣ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ್ದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿದ್ದ. ಪರಕೀಯರ ದಾಳಿಯಿಂದ ಕಿತ್ತೂರ ರಾಜ್ಯವನ್ನು ರಕ್ಷಿಸಲು ಅಂತಿಮ ಕ್ಷಣದವರೆಗೂ ಹೋರಾಟ ನಡೆಸಿದ್ದ ಎಂದು ಸ್ಮರಿಸಿದರು. ರಾಯಣ್ಣ ದೇಶಭಕ್ತಿ, ಪ್ರಮಾಣಿಕತೆ ಹಾದಿಯಲ್ಲಿ ನಾವೇಲ್ಲರೂ ನಡೆಯೋಣವೆಂದು ಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಶಿವರಾಜ್ ಗಿಡಣ್ಣನವರ, ಸಂಜು ಕರ್ಜಗಿ, ಅಪ್ಪು ಗೋರಮ್ಮನವರ, ಸತೀಶ ಹುಳೇಪ್ಪನವರ, ಲಕ್ಷ್ಮಣ ,ಶಿವು ಕುರುಬರ, ಪ್ರವೀಣ ಸುಣಗಾರ ಸೇರಿದಂತೆ ರಾಯಣ್ಣ ಸಂಘಟನೆ ಸದಸ್ಯರು ಹಾಜರಿದ್ದರು.

loading...