ಯಡಿಯೂರಪ್ಪ ಸರ್ಕಾರ ಕಣ್ಣು, ಕಿವಿ, ಬಾಯಿ ಇಲ್ಲದ ಸರ್ಕಾರ : ಸಿದ್ದರಾಮಯ್ಯ ವ್ಯಂಗ್ಯ

0
4

ಬೆಂಗಳೂರು:- ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 22 ದಿನಗಳು ಕಳೆದರೂ ಇನ್ನೂ ಮಂತ್ರಿಮಂಡಲ ವಿಸ್ತರಣೆಯಾಗಿಲ್ಲ, ದನಕರುಗಳಿಗೆ ಮೇವು ಇಲ್ಲ, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ, ರೈತರಿಗೆ, ಬಡವರಿಗೆ ಯಾರೂ ನೆರವಾಗುತ್ತಿಲ್ಲ
ಇದೊಂದು ಕಣ್ಣು, ಕಿವಿ, ಬಾಯಿ ಇಲ್ಲದ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ನೆರೆಹಾವಳಿಯಿಂದ ಸಾಕಷ್ಟು ನಷ್ಟವುಂಟಾಗಿದೆ ಎಂದು ಯಡಿಯೂರಪ್ಪ ಹೇಳುತ್ತಾರಾದರೂ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರದಿಂದ ಇವತ್ತಿನವರೆಗೂ ಒಂದು ರೂಪಾಯಿ ನೀಡಿಲ್ಲ. ರಾಜ್ಯದಲ್ಲಿ ಬರ ನೆರೆ ಎರಡೂ ಪರಿಸ್ಥಿತಿ ಇದ್ದು, ಇತ್ತ ನೋಡುವವರು ಇಲ್ಲ, ಕೇಳುವವರೂ ಇಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ಈ ಸರ್ಕಾರಕ್ಕೆ ಯಾವುದೇ ತತ್ವ ಸಿದ್ಧಾಂತಗಳಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇರುವುದು ಒನ್ ಮ್ಯಾನ್ ಷೋ ಮಾತ್ರ. ಸರ್ಕಾರವಿದ್ದರೂ ಅದು ನಿರ್ಲಜ್ಜ, ತುಂಡು ಸರ್ಕಾರ ಎಂದು ಟೀಕಿಸಿದರು.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ.‌ ಪ್ರಜಾಪ್ರಭುತ್ವ ಇದೆಯೇ? ಸಚಿವರೇ ಇಲ್ಲದ ಸರ್ಕಾರವನ್ನು ಪ್ರಜಾಪ್ರಭುತ್ವ ಎಂದು ಕರೆಯುವುದೇ ? ಇಂತಹ ಸರ್ಕಾರ ಏಕೆ ಇರಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದಲ್ಲಿ ನೆರೆಯಿಂದ ಸುಮಾರು ಒಂದು ಲಕ್ಷ ಕೋಟಿ ರೂ.ನಷ್ಟು ನಷ್ಟವುಂಟಾಗಿದೆ. 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಆದರೂ ಪ್ರಧಾನ ಮಂತ್ರಿಗಳು ರಾಜ್ಯದ ಪ್ರವಾಹದ ಬಗ್ಗೆ ಒಂದೇ ಒಂದು ಶಬ್ದ ಮಾತನಾಡಿಲ್ಲ. ಒಂದೆಡೆ ಪ್ರವಾಹ, ಇನ್ನೊಂದೆಡೆ ಬರ ಎರಡೂ ಇದೆ.ರಾಜ್ಯದ ಏಳು ಜಿಲ್ಲೆಗಳ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಆದರೆ ಸರ್ಕಾರ ಈ ಬಗ್ಗೆ ಮಾತೇ ಆಡುವುದಿಲ್ಲ.
ಬರ ನೆರೆ ಪೀಡಿತ ಜನರಿಗೆ ಸರ್ಕಾರ ಔಷಧಿ ಆಹಾರವನ್ನೂ ನೀಡಿಲ್ಲ.ಕೋಲಾರ, ಚಿಕ್ಕಬಳ್ಳಾಪುರ, ರಾಮ ನಗರ, ಬೆಂಗಳೂರು, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ವಾಡಿಕೆಗಿಂತ 20% ರಷ್ಟು ಕಡಿಮೆ ಮಳೆ ಆಗಿದೆ. ಕೇಂದ್ರದಿಂದ ಇವತ್ತಿನವರೆಗೂ ಒಂದು ರೂಪಾಯಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಇಂದಿನವರೆಗೆ ಬರ ಪೀಡಿತ ಪ್ರದೇಶಗಳು ಎಂದು ಸರ್ಕಾರ ಘೋಷಿಸಿಲ್ಲ. ಬರಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡದೆ ಇದ್ದರೆ ಬರ ಪರಿಹಾರ ಪಡೆಯಲು ಆಗುವುದಿಲ್ಲ. ಕೆಲವೆಡೆ ಬಿತ್ತನೆ ಹಾಳಾಗಿದೆ. ಇನ್ನೂ ಕೆಲವೆಡೆ ಬಿತ್ತನೆ ಮಾಡದಂತಹ ಸ್ಥಿತಿ ಇದೆ. ಮಳೆ ಇಲ್ಲದೆ ಜಾನುವಾರುಗಳುಗೆ ಮೇವಿಲ್ಲ. ಕೇಂದ್ರ ಆದಷ್ಟು ಬೇಗ ಐದು ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು.ಸರ್ಕಾರ‌ ಕೂಡಲೇ ಬರ ಪ್ರದೇಶಗಳನ್ನು ಘೋಷಿಸಬೇಕು.
ರಾಜ್ಯದಲ್ಲಾಗಿರುವ ಅನಾಹುತ ಬಗ್ಗೆ ಸಮಸ್ಯೆ ಕುರಿತು ಯಡಿಯೂರಪ್ಪ ಸರ್ವಪಕ್ಷ ಸಭೆ ಕರೆದು ಕೇಂದ್ರಕ್ಕೆ ನಿಯೋಗ ಕೊಂಡೊಯ್ಯಬೇಕು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸಚಿವರಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ನಿಜವಾಗಲೂ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ವರದಿಯೇ ಸಿದ್ಧಗೊಂಡಿಲ್ಲ ಸರ್ವೆನೂ ನಡೆದಿಲ್ಲ. ಈವರೆಗೆ ಎಷ್ಟು ನಷ್ಟ ಆಗಿದೆ ಎಂಬ ವರದಿಯನ್ನೇ ತಯಾರಿಸಿಲ್ಲ. ನಿಜವಾಗಲೂ ನರೇಂದ್ರ ಮೋದಿ ಬಂದು ನೋಡಬೇಕಿತ್ತು‌. ಕೇಂದ್ರದಿಂದ ಬಂದ ಸಚಿವರು ನೆರೆ ಸಮೀಕ್ಷೆ ಬಗ್ಗೆ ಏನು ಮಾತನಾಡದೇ ಪರಿಹಾರ ಘೋಷಿಸದೇ ತೆರಳಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸೋಮವಾರದಿಂದ ತಾವು ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿದ್ದು,

ರಾಜ್ಯದಲ್ಲಿ ಸರ್ಕಾರ ಇರುವುದೇ ಆದರೆ ನೆರೆ ಬರ ಸಂಬಂಧ ಚರ್ಚಿಸಲು ಆದಷ್ಟು ಬೇಗ ಅಧಿವೇಶನ ಕರೆಯಲಿ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದರು.
ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗಾಗಿ ಅನ್ನಭಾಗ್ಯ ಯೋಜನೆಯ ಅನುದಾನಕ್ಕೆ ಕತ್ತರಿ ವಿಚಾರಕ್ಕೆ ಕಿಡಿಕಾರಿದ ಸಿದ್ದರಾಮಯ್ಯ, ಬಡವರಿಗೆ ಕಡಿಮೆ ದರದಲ್ಲಿ ಪೌಷ್ಠಿಕ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದ್ಯತೆಯ ಮೇರೆಗೆ ಕಾರ್ಯಕ್ರಮ ಜಾರಿಗೊಂಡಿದ್ದು, ಲಕ್ಷಾಂತರ ಬಡವರಿಗೆ ಇದರಿಂದ ಅನಕೂಲವಾಗಿದೆ. ಇಂತಹ ಜನಪರ ಯೋಜನೆಗೆ ಸರ್ಕಾರ ಕತ್ತರಿ ಹಾಕುವ ಚಿಂತನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ರಾಜ್ಯದಲ್ಲಿ ಬಡತನದ ರೇಖೆಗಿಂತ ಕೆಳಗಿನ ಸುಮಾರು ನಾಲ್ಕು ಕೋಟಿ ಜನರು ಊಟ ಮಾಡಲೇಬೇಕೆಂದು ಏಳು ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಅನ್ನಭಾಗ್ಯ ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಿ ಅದರ ಅನುದಾನವನ್ನು ಕಿಸಾನ್ ಸಮ್ಮಾನ್ ಗೆ ಬಳಸಿಕೊಳ್ಳಲು ಮುಂದಾಗಿದೆ. ರೈತರಿಗೆ ನಾಲ್ಕು ಸಾವಿರ ರೂ ಕೊಡುವುದು ತಪ್ಪಲ್ಲ. ಆದರೆ ಅನ್ನಭಾಗ್ಯ ಯೋಜನೆ ಅನುದಾನಕ್ಕೆ ಕತ್ತರಿಹಾಕಿ ಬಳಸಿಕೊಳ್ಳುವುದು ಸರಿಯಲ್ಲ.ಅನ್ನಭಾಗ್ಯ ಬಡವರ ಕಾರ್ಯಕ್ರಮ.ಬಡವರು ಸರ್ಕಾರದ ಈ ತೀರ್ಮಾನವನ್ನು ಸಹಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ರೈತರು ಗುಳೆ ಹೋಗುವುದನ್ನು ತಪ್ಪಿಸಲು ಬಡವರ ಹೊಟ್ಟೆ ತುಂಬಿಸುವ ದೇಶದಲ್ಲಿಯೇ ಮೆಚ್ಚುಗೆ ಪಡೆದ ಯೋಜನೆ ನಮ್ಮದು.ಸರ್ಕಾರ ಏನಾದರೂ ಅನ್ನಭಾಗ್ಯ ಅನುದಾನಕ್ಕೆ ಕತ್ತರಿ ಹಾಕುವ ಚಿಂತನೆ ನಡೆಸಿದ್ದರೆ ಅದನ್ನು ಕೂಡಲೇ ಕೈಬಿಡಬೇಕು. ಸರ್ಕಾರದ ತೀರ್ಮಾನವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಲಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಆಯುಕ್ತರು ಇಂದಿರಾ ಕ್ಯಾಂಟೀನ್ ಗೆ ಸರ್ಕಾರ ಹಣ ನೀಡುತ್ತಿಲ್ಲ ಎಂದಿದ್ದಾರೆ. ಬಿಬಿಎಂಪಿಯವರೇ ಇಂದಿರಾ ಕ್ಯಾಂಟೀನ್ ಅನ್ನು ನಿರ್ವಹಿಸಬೇಕು ಎಂದು ಸರ್ಕಾರ ಹೇಳುತ್ತಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಇಂದಿರಾ ಕ್ಯಾಂಟೀನ್ ಸಹ ಬಡವರ ಹೊಟ್ಟೆ ತುಂಬಿಸುವ ಯೋಜನೆ. ರಾಜ್ಯ ಸರ್ಕಾರ ನಿರಂತರವಾಗಿ ಇಂದಿರಾ ಕ್ಯಾಂಟೀನ್ ಮುಂದುವರೆಸಬೇಕು.ಶಾಲಾ, ಕಾಲೇಜು ,ಬಸ್ಟ್ಯಾಂಡ್ ಸೇರಿದಂತೆ ಜನಸಂದಣಿ ಹೆಚ್ಚಾಗುವ ಕಡೆ ಇಂದಿರಾ ಕ್ಯಾಂಟೀನ್ ಮಾಡಲು ಒತ್ತಡ ಬರುತ್ತಿವೆ . ಸರ್ಕಾರ ಇನ್ನಷ್ಟು ಕ್ಯಾಂಟೀನ್ ಗಳನ್ನು ಆರಂಭಿಸಬೇಕು. ಇಂದಿರಾ ಕ್ಯಾಂಟೀನ್ ನಲ್ಲಿ ಗುಣಮಟ್ಟದ ಆಹಾರ ಸಿಗಲು, ಅದರ ನಿರ್ವಹಣೆಯನ್ನು ರಾಜ್ಯ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಎಲ್ಲಾ ತಾಲೂಕುಗಳಲ್ಲಿಯೂ ಇಂದಿರಾ ಕ್ಯಾಂಟೀನ್ ತೆರೆಯುವ ಬಗ್ಗೆ ಪ್ರಸ್ತಾವನೆ ಇದೆ.
ಸರ್ಕಾರ ಬಡವರಿಗಾಗಿಯೇ ಇರುವ ಯೋಜನೆಗಳನ್ನು ಕಡಿತಗೊಳಿಸಬಾರದು.
ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಎರಡೂ ಕೂಡ ಕಾಂಗ್ರೆಸ್ ಸರ್ಕಾರದ ಬಡವರ ಪರ ಇರುವ ಯೋಜನೆಗಳು.ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಒತ್ತಾಯಿಸಿದರು.
ಉಪಚುನಾವಣೆ ಸಂಬಂಧ ಪಕ್ಷದಲ್ಲಿ ಚರ್ಚೆ ನಡೆಸಲಾಗಿದೆಯಾದರೂ ಇದೂವರೆಗೆ ಯಾರನ್ನು ಕಣಕ್ಕೆ ಇಳಿಸಬೇಕೆಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಯಾರನ್ನೂ ಆಯ್ಕೆ ಮಾಡಬೇಕು ಎಂಬುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಸದ್ಯಕ್ಕೆ ತಾವು ಶಾಸಕಾಂಗ ನಾಯಕ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ 22 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ಭಾಗವಹಿಸಲು ದೆಹಲಿಗೆ ತೆರಳುತ್ತಿರುವುದಾಗಿ ಅವರು ಹೇಳಿದರು.
ಕಾವೇರಿ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ತಾವು ಕಾವೇರಿಯಲ್ಲಿ ಇರುವುದಕಕ್ಕೂ ಪ್ರತಿಪಕ್ಷ ನಾಯಕನಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಕಾವೇರಿ ಮಾಜಿ ಸಚಿವ ತಮ್ಮ ಸ್ನೇಹಿತ ಕೆ.ಜೆ.ಜಾರ್ಜ್ ಹೆಸರಿನಲ್ಲಿ ಇದೆ. ಇಲ್ಲಿಯೇ ಇನ್ನು ಸ್ವಲ್ಪ ದಿನ ಇರಲು ಅವಕಾಶ ಇದೆ. ಮುಂದೆ ವಾಸ್ತವ್ಯ ಬದಲಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

loading...