ಭಾರತ-ವೆಸ್ಟ್‌ ಇಂಡೀಸ್‌ ಮೊದಲ ಟೆಸ್ಟ್‌ ಹಣಾಹಣಿ ನಾಳೆ

0
7

ನಾರ್ಥ್ ಸೌಂಡ್‌ (ಅಂಟಿಗುವಾ) ಬ್ಯಾಟಿಂಗ್, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರು ವಿಭಾಗಗಳಲ್ಲಿ ಪರಿಪೂರ್ಣ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಾಳೆ ಸೆಣಸಲಿ ಸಜ್ಜಾಗಿದೆ.ಮೊದಲನೇ ಪಂದ್ಯ ಭಾರತ ಜಯ ಸಾಧಿಸಿದರೆ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಜಯದ ದಾಖಲೆಯನ್ನು ವಿರಾಟ್‌ ಸರಿದೂಗಿಸಲಿದ್ದಾರೆ. ಅಲ್ಲದೇ, ಇದೇ ಪಂದ್ಯದಲ್ಲಿ ಶತಕ ಸಿಡಿಸಿದರೆ ನಾಯಕನಾಗಿ ಅತಿ ಹೆಚ್ಚು ಶತಕ ಸಿಡಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ (19ನೇ ಶತಕ) ಅವರ ದಾಖಲೆಯನ್ನೂ ಸಮನಾಗಿಸಲಿದ್ದಾರೆ.
ವಿರಾಟ್‌ ಕೊಹ್ಲಿ, ಚೇತೇಶ್ವರ ಪೂಜಾರ, ಕೆ.ಎಲ್‌ ರಾಹುಲ್‌, ರೋಹಿತ್‌ ಶರ್ಮಾ, ಹಾಗೂ ರಿಷಭ್‌ ಪಂತ್‌ ಭಾರತದ ಬ್ಯಾಟಿಂಗ್‌ ವಿಭಾಗದಲ್ಲಿ ಕಣಕ್ಕೆ ಇಳಿಯುವುದು ಸ್ಪಷ್ಟವಾಗಿದೆ. ಆದರೆ, ಎದುರಾಳಿ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಇನ್ನೂ ಸ್ಪಷ್ಟತೆಯಿಲ್ಲ.
ಕೆರಿಬಿಯನ್‌ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್‌ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ 1-2 ಅಂತರದಲ್ಲಿ ಸೋಲು ಅನುಭವಿಸಿತ್ತು. ಇದೇ ಲಯವನ್ನು ವಿಶ್ವದ ಅಗ್ರ ಕ್ರಮಾಂಕದ ತಂಡದ ವಿರುದ್ಧ ಮುಂದುವರಿಸುವ ಯೋಜನೆಯಲ್ಲಿ ಜೇಸನ್‌ ಹೋಲ್ಡರ್‌ ಪಡೆ ಲೆಕ್ಕ ಹಾಕಿದೆ.
ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿನ ಪಿಚ್‌ ವೇಗಿಗಳ ಸ್ನೇಹಿಯಾಗಿದೆ. ಕೊಹ್ಲಿ ಬಳಗದ ಬ್ಯಾಟಿಂಗ್‌ ಪಡೆ ಮೊದಲನೇ ಪಂದ್ಯದಲ್ಲಿ ವಿಂಡೀಸ್‌ ವೇಗಿಗಳ ಎದುರು ಅಗ್ನಿ ಪರೀಕ್ಷೆ ಎದುರಿಸಲಿದೆ.
ಇದೇ ಅಂಗಳದಲ್ಲಿ ಕೊನೆಯ ಬಾರಿ ಇಂಗ್ಲೆಂಡ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 187 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 132 ರನ್‌ ಗಳಿಸಿತ್ತು. ಆದರೆ, ನಾಳೆಯೂ ಅದೇ ರೀತಿ ಪಿಚ್‌ ಇರುತ್ತದೆ ಎಂದು ಹೇಳುವುದು ಅಸಾಧ್ಯವಾದ ಮಾತು. ವಿಕೆಟ್‌ ಹಾಗೂ ವಾತಾವರಣಕ್ಕೆ ತಕ್ಕಂತೆ ಆಟಗಾರರು ಹೊಂದಿಕೊಳ್ಳಬೇಕು.
ಇತ್ತೀಚೆಗಷ್ಟೆ ನಾಯಕನಾಗಿ ವಿರಾಟ್‌ ಕೊಹ್ಲಿ ಮತ್ತು ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ಅವರನ್ನೇ ಎರಡನೇ ಅವಧಿಗೆ ಮುಂದುವರಿಸಲಾಗಿದೆ. ಇವರಿಬ್ಬರಿಗೂ ನಾಳೆಯಿಂದ ಹೊಸ ಚಾಲೆಂಜ್‌ ಎದುರಾಗಲಿದೆ. ಕೇಮರ್‌ ರೋಚ್‌, ಶನ್ನೋನ್‌ ಗ್ಯಾಬ್ರಿಯಲ್‌ ಮತ್ತು ನಾಯಕ ಜೇಸನ್‌ ಹೋಲ್ಡರ್‌ ಅವರ ಮಾರಕ ದಾಳಿ ಭಾರತದ ಬ್ಯಾಟಿಂಗ್‌ ಪಾಳಯಕ್ಕೆ ಸವಾಲಾಗಲಿದೆ.
ನಾಳೆ ಬೆಳಗ್ಗೆ ಪಿಚ್‌ನ ವೇಗ ಮತ್ತು ಬೌನ್ಸ್‌ ಗಮನಿಸಿ ನಾಯಕ ಕೊಹ್ಲಿ ನಾಲ್ಕು ವಿಶೇಷ ವೇಗಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಒಂದು ವೇಳೆ ಇದು ಸಕಾರವಾದರೆ, ಒಬ್ಬ ಸ್ಪಿನ್‌ ಆಯ್ಕೆಗೆ ರವಿಚಂದ್ರನ್‌ ಅಶ್ವಿನ್‌ ಹಾಗೂ ಕುಲ್ದೀಪ್‌ ಯಾದವ್‌ ನಡುವೆ ಸ್ಪರ್ಧೆ ಏರ್ಪಡಲಿದೆ. ಜಸ್ಪ್ರಿತ್‌ ಬುಮ್ರಾ, ಇಶಾಂತ್‌ ಶರ್ಮಾ ಹಾಗೂ ಇಶಾಂತ್‌ ಶರ್ಮಾ ಅವರು ಕಣಕ್ಕೆ ಇಳಿಯುವುದ ಬಹುತೇಕ ಖಚಿತ.

ಪಿಚ್‌ ಮೇಲೆ ಹೆಚ್ಚು ಹಸಿರು ಹೊದಿಕೆ ಕಂಡು ಬಂದರೆ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಒಳಗೊಂಡಂತೆ ಐವರು ಬೌಲರ್‌ಗಳನ್ನು ಕೊಹ್ಲಿ ಕಣಕ್ಕೆ ಇಳಿಸಲಿದ್ದಾರೆ. ಜತೆಗೆ, ರೋಹಿತ್‌ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಅವರನ್ನೂ ಅಂಗಳಕ್ಕೆ ಕರೆ ತರಲಿದ್ದಾರೆ.

ಕನ್ನಡಿಗರೇ ಆರಂಭಿಕರು?”
ಮಯಾಂಕ್‌ ಅಗರ್ವಾಲ್‌ ಜತೆ ಆರಂಭಿಕನಾಗಿ ಕಣಕ್ಕೆ ಇಲಿಯುವುದು ಯಾರು ಎಂಬುದು ಇದೀಗ ಟೀಮ್‌ ಇಂಡಿಯಾ ಮುಂದಿರುವ ಪ್ರಶ್ನೆ. ಮತ್ತೊಬ್ಬ ಕನ್ನಡಿಗ ಕೆ.ಎಲ್‌ ರಾಹುಲ್‌ ಅವರನ್ನೇ ಆರಂಭಿಕನಾಗಿ ಕಳುಹಿಸಬಹುದು ಎಂದು ಹೇಳಬಹುದು. ಆದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಹನುಮ ವಿಹಾರಿ ಅವರು ಕಾಂಗೂರುಗಳ ವಿರುದ್ಧ ಸ್ಪೋಟಿಸಿದ್ದರು. ಆದರೆ, ವೆಸ್ಟ್‌ ಇಂಡೀಸ್ ನ ಬದಲಿ ವೇಗಿಗಳ ಎದುರು ಅದೇ ರೀತಿ ಆಡಬಹುದು ಎಂದು ಹೇಳಲು ಹೇಗೆ ಸಾಧ್ಯ. ಆದ್ದರಿಂದ ಆರಂಭಿಕ ಜೋಡಿ ಬಗ್ಗೆ ಕುತೂಹಲ ಇದೆ.

ಮತ್ತೊಂದೆಡೆ ಎದುರಾಳಿ ವೆಸ್ಟ್‌ ಇಂಡೀಸ್ ಬಲಿಷ್ಟ ಇಂಗ್ಲೆಂಡ್‌ ಎದುರು ಕಳೆದ ಟೆಸ್ಟ್‌ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿ ಒಂದು ಕಡೆ ಕಂಡರೆ, ಮತ್ತೊಂದೆಡೆ ಟಿ-20 ಹಾಗೂ ಏಕದಿನ ಸರಣಿ ಕಳೆದುಕೊಂಡು ಒತ್ತಡದಲ್ಲಿದೆ. ಆದರೂ ವಿಂಡೀಸ್‌ ಪಾಳಯದಲ್ಲಿ ಶಾಯ್‌ ಹೋಪ್‌, ಜಾನ್‌ ಕ್ಯಾಂಪ್‌ಬೆಲ್‌, ಶಿಮ್ರಾನ್‌ ಹೆಟ್ಮೇರ್‌ ಅವರಂಥ ಪ್ರತಿಭಾವಂತ ಯುವ ಆಟಗಾರರಿದ್ದಾರೆ.

ವೆಸ್ಟ್ ಇಂಡೀಸ್‌ ತಂಡದಲ್ಲಿ ಡೆರೆನ್ ಬ್ರಾವೊ ಅವರು 52 ಪಂದ್ಯಗಳಿಂದ 3,500 ರನ್‌ ಗಳಿಸಿರುವ ಹಿರಿಯ ಬ್ಯಾಟ್ಸ್‌ಮನ್‌ ಇದ್ದು, ಅವರು 38ಕ್ಕೂ ಹೆಚ್ಚು ಸರಾಸರಿಯಲ್ಲಿ ಎಂಟು ಶತಕ ಗಳಿಸಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲೇ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಅವಕಾಶ ಪಡೆದಿರುವ ವೆಸ್ಟ್‌ ಇಂಡೀಸ್‌ನ ರಕೀಮ್‌ ಕಾರ್ನ್‌ವಾಲ್‌ ಅವರ ಮೇಲೆ ಎಲ್ಲರ ಚಿತ್ತ ಹರಿದಿದೆ. ಇವರು ದೈತ್ಯ ದೇಹ ಇಟ್ಟುಕೊಂಡಿದ್ದು, ಆಫ್‌ ಸ್ಪಿನ್‌ ಹಾಗೂ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿದ್ದಾರೆ.
ತಂಡಗಳು

ಭಾರತ

ವಿರಾಟ್‌ ಕೊಹ್ಲಿ (ನಾಯಕ), ಮಯಾಂಕ್‌ ಅಗರ್ವಾಲ್‌, ಕೆ.ಎಲ್‌ ರಾಹುಲ್‌, ಚೇತೇಶ್ವರ ಪೂಜಾರ, ಹನುಮ ವಿಹಾರಿ, ಅಜಿಂಕ್ಯಾ ರಹಾನೆ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌ (ವಿ.ಕೀ), ಕುಲ್ದೀಪ್‌ ಯಾದವ್‌, ರವಿಚಂದ್ರ ಅಶ್ವಿನ್‌, ರವೀಂದ್ರ ಜಡೇಜಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಜಸ್ಪ್ರಿತ್‌ ಬುಮ್ರಾ, ಉಮೇಶ್‌ ಯಾದವ್, ಭುವನೇಶ್ವರ್‌ ಕುಮಾರ್‌, ವೃದ್ಧಮಾನ್‌ ಸಾಹ(ವಿ.ಕೀ)

ವೆಸ್ಟ್‌ ಇಂಡೀಸ್‌

ಜೇಸನ್‌ ಹೋಲ್ಡರ್‌(ನಾಯಕ), ಕ್ರೈಗ್‌ ಬ್ರಾಥ್‌ ವೇಟ್‌, ಡೆರೆನ್‌ ಬ್ರಾವೊ, ಶಮರಹ್‌ ಬ್ರೂಕ್ಸ್‌, ಜಾನ್‌ ಕ್ಯಾಂಪ್‌ಬೆಲ್‌, ರೋಸ್ಟನ್‌ ಚೇಸ್‌, ರಕೀಮ್‌ ಕಾರ್ನ್‌ವಾಲ್‌, ಶೇನ್‌ ಡೌರಿಚ್‌, ಶನ್ನೋನ್‌ ಗ್ಯಾಬ್ರಿಯಲ್‌, ಶಿಮ್ರಾನ್‌ ಹೆಟ್ಮೇರ್‌, ಶಾಯ್‌ ಹೋಪ್‌, ಕಿಮೋ ಪಾಲ್‌, ಕೇಮರ್‌ ರೋಚ್‌,
ಸಮಯ: ನಾಳೆ ಸಂಜೆ 07:00
ಸ್ಥಳ: ಸರ್‌ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣ, ಅಂಟಿಗುವಾ

loading...