ರಹಾನೆ ಅರ್ಧ ಶತಕದ ನಡುವೆಯೂ ಭಾರತಕ್ಕೆ ಮೊದಲ ದಿನ ಹಿನ್ನಡೆ

0
6

ಅಂಟಿಗುವಾ:-ಅಜಿಂಕ್ಯಾ ರಹಾನೆ (81 ರನ್‌, 163 ಎಸೆತಗಳು) ಅವರ ಅರ್ಧ ಶತಕದ ಹೊರತಾಗಿಯೂ ಕೇಮರ್‌ ರೋಚ್‌ (34ಕ್ಕೆ3) ಮಾರಕ ದಾಳಿಗೆ ನಲುಗಿದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ ಆರಂಭಿಕ ದಿನ ಹಿನ್ನಡೆ ಅನುಭವಿಸಿತು.
ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಮೊದಲ ದಿನದ ಮುಕ್ತಾಯಕ್ಕೆ 68.5 ಓವರ್‌ಗಳಿಗೆ ಆರು ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು.
ಟಾಸ್‌ ಗೆದ್ದು ಮೊದಲು ಭಾರತಕ್ಕೆ ಬ್ಯಾಟಿಂಗ್‌ ಆಹ್ವಾನಿಸಿದ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅವರ ಯೋಜನೆ ಸಫಲವಾಯಿತು. ಇದಕ್ಕೆ ಕಾರಣವಾಗಿದ್ದು ಆರಂಭಿಕ ವೇಗಿ ಕೇಮರ್‌ ರೋಚ್‌ ಹಾಗೂ ಶನ್ನೋನ್‌ ಗ್ಯಾಬ್ರಿಯಲ್‌. ಇವರಿಬ್ಬರು ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್‌ ಕಬಳಿಸಿ ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಬಾಯಿಸಿದರು.
ಭಾರತದ ಪರ ಆರಂಭಿಕರಾಗಿ ಕಣಕ್ಕೆ ಇಳಿದ ಕೆ.ಎಲ್‌ ರಾಹುಲ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಜೋಡಿ ಆರಂಭದಲ್ಲೇ ಬೇರ್ಪಟ್ಟಿತು. ಕೇವಲ ಐದು ರನ್‌ ಗಳಿಸಿ ಮಯಾಂಕ್‌, ಕೇಮರ್‌ ರೋಚ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ಟೆಸ್ಟ್‌ ವಿಶೇಷ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ(2) ಕೂಡ ರೋಚ್‌ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರೀಕ್ಷೆ ಹುಸಿ ಮಾಡಿದರು.
ಒಂಬತ್ತು ರನ್‌ ಗಳಿಸಿ ಆಡುತ್ತಿದ್ದ ನಾಯಕ ವಿರಾಟ್‌ ಕೊಹ್ಲಿ ಕೂಡ ಶನ್ನೋನ್‌ ಗ್ಯಾಬ್ರಿಯಲ್‌ಗೆ ವಿಕೆಟ್‌ ಒಪ್ಪಿಸಿದರು.

ನಂತರ, ನಾಲ್ಕನೇ ವಿಕೆಟ್‌ಗೆ ಜತೆಯಾಟ ಕೆ.ಎಲ್‌ ರಾಹುಲ್‌ ಹಾಗೂ ಅಜಿಂಕ್ಯಾ ರಹಾನೆ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಜೋಡಿಯು 68 ರನ್‌ ಜತೆಯಾಟವಾಡುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡಕ್ಕೆ ಅಲ್ಪ ಚೇತರಿಕೆ ನೀಡಿತು. 97 ಎಸೆತಗಳಲ್ಲಿ ಐದು ಬೌಂಡರಿಯೊಂದಿಗೆ 44 ರನ್‌ ಗಳಿಸಿದ್ದ ಕೆ.ಎಲ್‌ ರಾಹುಲ್‌, ಅರ್ಧ ಶತಕದ ಸಮೀಪ ಮುನ್ನಡೆಯುತ್ತಿದ್ದಾಗ ಅವರನ್ನು ರೋಸ್ಟನ್‌ ಚೇಸ್‌ ಕೆಡವಿದರು.
ಹನುಮ ವಿಹಾರಿ 56 ಎಸೆತಗಳಲ್ಲಿ 32 ರನ್‌ ಗಳಿಸಿ ದೊಡ್ಡ ಇನಿಂಗ್ಸ್‌ ಕಟ್ಟುವ ಮುನ್ಸೂಚನೆ ನೀಡಿದರು. ಆದರೆ, ಇದಕ್ಕೆ ಕೇಮರ್‌ ರೋಚ್‌ ಅವಕಾಶ ನೀಡಲಿಲ್ಲ.
ಅದ್ಭುತ ಇನಿಂಗ್ಸ್‌ ಕಟ್ಟಿದ ಉಪ ನಾಯಕ ಅಜಿಂಕ್ಯಾ ರಹಾನೆ ಬಹಳ ಸೊಗಸಾಗಿ ಬ್ಯಾಟಿಂಗ್‌ ಮಾಡಿದರು. ವೆಸ್ಟ್‌ ಇಂಡೀಸ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು, 163 ಎಸೆತಗಳಲ್ಲಿ 10 ಬೌಂಡರಿಯೊಂದಿಗೆ 81 ರನ್‌ ಗಳಿಸಿದರು. ಜವಾಬ್ದಾರಿಯುತ ಬ್ಯಾಟಿಂಗ್‌ನೊಂದಿಗೆ ಮುನ್ನಗ್ಗುತ್ತಿದ್ದ ಅವರನ್ನು ಶನ್ನೋನ್‌ ಗ್ಯಾಬ್ರಿಯಲ್‌ ಕ್ಲೀನ್‌ ಬೌಲ್ಡ್‌ ಮಾಡಿದರು.
ಒಟ್ಟಾರೆ, ಭಾರತಕ್ಕೆ ಮೊದಲ ದಿನ 203 ರನ್‌ಗಳಿಗೆ ಪ್ರಮುಖ ಆರು ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ರವೀಂದ್ರ ಜಡೇಜಾ (ಔಟಾಗದೆ 20 ರನ್‌) ಹಾಗೂ ರಿಷಭ್‌ ಪಂತ್‌(ಔಟಾಗದೆ 3 ರನ್) ವಿಕೆಟ್‌ ಕಾಯ್ದುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್‌
ಭಾರತ
ಪ್ರಥಮ ಇನಿಂಗ್ಸ್‌: 68.5 ಓವರ್‌ಗಳಲ್ಲಿ 203/6 (ಅಜಿಂಕ್ಯಾ ರಹಾನೆ 81, ಕೆ.ಎಲ್‌ ರಾಹುಲ್‌ 44, ಹನುಮ ವಿಹಾರಿ 32; ಕೇಮರ್‌ ರೋಚ್‌ 34 ಕ್ಕೆ 3, ಶನ್ನೋನ್‌ ಗ್ಯಾಬ್ರಿಯಲ್‌ 49 ಕ್ಕೆ 2, ರೋಸ್ಟನ್‌ ಚೇಸ್‌ 42 ಕ್ಕೆ 1)

loading...