ವಿವಿಯನ್‌ ರಿಚರ್ಡ್ಸ್ ಅಂಗಳದಲ್ಲಿ ಆಡಲು ಇಷ್ಟ : ರೋಚ್‌

0
17

ನಾರ್ಥ್ ಸೌಂಡ್‌, (ಅಂಟಿಗುವಾ):-ಸರ್‌ ವಿವಿಯನ್‌ ರಿಚರ್ಡ್ಸ್ ಅಂಗಳದ ಪಿಚ್‌ ಸ್ಥಿತಿ ಆರಂಭದಲ್ಲಿ ವೇಗಿಗಳಿಗೆ ಸಹಾಯಕವಾಗಿತ್ತು ಎಂದು ವೆಸ್ಟ್‌ ಇಂಡೀಸ್‌ ತಂಡದ ವೇಗಿ ಕೇಮರ್‌ ರೋಚ್‌ ಹೇಳಿದ್ದಾರೆ.
ಭಾರತದ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನ ಆರಂಭಿಕ ದಿನ ಮುಕ್ತಾಯಕ್ಕೆ ಭಾರತ ಆರು ವಿಕೆಟ್‌ ಕಳೆದುಕೊಂಡು 203 ರನ್‌ ದಾಖಲಿಸಿತ್ತು. ಭಾರತದ ಪರ ಅಜಿಂಕ್ಯಾ ರಹಾನೆ 81, ಕೆ.ಎಲ್‌ ರಾಹುಲ್‌ 44 ಹಾಗೂ ಹನುಮ ವಿಹಾರಿ 32 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾಗಿದ್ದರು. ಅತ್ಯುತ್ತಮ ಬೌಲಿಂಗ್‌ ಮಾಡಿದ್ದ ಕೇಮರ್ ರೋಚ್‌ ಅವರು ಮಯಾಂಕ್‌ ಅಗರ್ವಾಲ್‌, ಚೇತೇಶ್ವರ ಪೂಜಾರ ಹಾಗೂ ಹನುಮ ವಿಹಾರಿ ಅವರ ವಿಕೆಟ್‌ಗಳನ್ನು ಕಿತ್ತಿದ್ದರು.
ಪಂದ್ಯದ ಬಳಿಕ ಮಾತನಾಡಿದ ಅವರು, ಅಂಟಿಗುವಾ ಪಿಚ್‌ ಎಂದಿನಂತೆ ಸಾಮಾನ್ಯವಾಗಿಯೇ ಇತ್ತು. ಬೆಳಗಿನ ಜಾವಾ ಪಿಚ್‌ ಬೌಲರ್‌ಗಳಿಗೆ ನೆರವಾಗುತ್ತದೆ. ಹಾಗಾಗಿ, ಹೊಸ ಚೆಂಡು ಬೌಲಿಂಗ್‌ ಮಾಡಲು ಪಿಚ್‌ ಸಹಕರಿಸಿತ್ತು. ಈ ಅಂಗಳದಲ್ಲಿ ಆಡಲು ಹೆಚ್ಚು ಇಷ್ಟಪಡುತ್ತೇನೆ. ಈ ಹಿಂದೆ ಹಲವು ಬಾರಿ ಇದೇ ಅಂಗಳದಲ್ಲಿ ಯಶಸ್ಸು ಕಂಡಿದ್ದೇನೆ ಎಂದು ಹೇಳಿದರು. ಅಜಿಂಕ್ಯಾ ರಹಾನೆ ಹಾಗೂ ಕೆ.ಎಲ್‌ ರಾಹುಲ್‌ ಮುರಿಯದ ನಾಲ್ನನೇ ವಿಕೆಟ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿದರು. ಈ ವೇಳೆ ಪಿಚ್‌ ಫ್ಲಾಟ್‌ ಆಗಿತ್ತು. ಹಾಗಾಗಿ, ಅವರು ಬ್ಯಾಟಿಂಗ್‌ ಮಾಡಲು ಸುಲಭವಾಗಿತ್ತು. ಮೊದಲನೇ ದಿನ 200 ರನ್ ಗಳಿಗೆ ಆರು ವಿಕೆಟ್‌ ಕಿತ್ತು ಯಶಸ್ಸು ಸಾಧಿಸಿದ್ದೇವೆ. ತಂಡದ ಎಲ್ಲರು ಉತ್ತಮ ಪ್ರದರ್ಶನ ತೋರಿದ್ದಾರೆ ಎಂದು ರೋಚ್‌ ಇದೇ ಶ್ಲಾಘಿಸಿದರು.

ಎರಡನೇ ದಿನ ಮೊದಲ ಅವಧಿ ವೆಸ್ಟ್ ಇಂಡೀಸ್‌ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರುತ್ತದೆ. ಭಾರತ ಹೆಚ್ಚು ರನ್ ಗಳಿಸಲು ಅವಕಾಶ ನೀಡದಂತೆ ಕಡಿವಾಣ ಹಾಕುವುದು ನಮ್ಮ ಉದ್ದೇಶ. ಹಾಗಾಗಿ, ಆದಷ್ಟು ಬೇಗ ವಿಕೆಟ್‌ ಉರುಳಿಸುವ ಕಡೆ ಗಮನ ಹರಿಸುತ್ತೇವೆ. ಎರಡನೇ ದಿನ 50 ರಿಂದ 60 ರನ್‌ ಅವರಿಗೆ ಬಿಟ್ಟುಕೊಟ್ಟರೆ ನಮ್ಮ ಪಾಲಿಗೆ ಉತ್ತಮವಾಗಲಿದೆ ಎಂದು ಕೇಮರ್‌ ರೋಚ್‌ ನುಡಿದರು.

loading...