ಅವ್ಯವಹಾರದ ಪ್ರಕರಣ ಇತ್ಯರ್ಥದ ಭರವಸೆ: ಪ್ರತಿಭಟನೆ ಹಿಂದಕ್ಕೆ

0
20

 

ಕುಮಟಾ: ತಾಲೂಕಿನ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರು ಬರಗದ್ದೆಯ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಸಂಘದಲ್ಲಿ ನಡೆದ ಅವ್ಯವಹಾರದಲ್ಲಿ ವಂಚನೆಗೊಳಗಾದ ರೈತರು ಮಂಗಳವಾರವೂ ಪಟ್ಟಣದ ಕೆಡಿಸಿಸಿ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎನ್ ಎನ್ ಹೆಗಡೆ ಅವರು ಆಗಸ್ಟ್ ೨೯ರ ಒಳಗಡೆ ಪ್ರಕರಣ ಇತ್ಯರ್ಥ ಪಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು.
ಕುಮಟಾ ತಾಲೂಕಿನ ಬರಗದ್ದೆಯ ಗ್ರಾಮೀಣ ಸೇವಾ ಸಹಕಾರಿ ಸಂಘವು ರೈತರು ಪಡೆದ ಬೆಳೆ ಸಾಲಕ್ಕಿಂದ ಮೂರು ಪಟ್ಟು ಹೆಚ್ಚಿಗೆ ಸಾಲ ಪಡೆದಿರುವ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂ. ವಂಚಿಸಲಾಗಿದೆ. ಸಾಲ ಮನ್ನಾ ಆದ ರೈತರ ಹಣವನ್ನು ನೀಡುವಂತೆ ಒತ್ತಾಯಿಸಿ ಕೆಡಿಸಿಸಿ ಬ್ಯಾಂಕ್‌ನಲ್ಲಿ ಕೆಲ ದಿನಗಳಿಂದ ಹೋರಾಟ ನಡೆಯುತ್ತಿದ್ದು, ಯಾವ ಭರವಸೆಗಳಿಗೂ ಜಗ್ಗದ ರೈತರು ಸಂಘದ ಕಾರ್ಯದರ್ಶಿಯನ್ನು ಕರೆಯಿಸಿ ಪ್ರಕರಣ ಇತ್ಯರ್ಥ ಪಡಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದಿದ್ದರು. ಮಂಗಳವಾರ ಕೂಡ ಮುಂದುವರೆದ ಪ್ರತಿಭಟನೆಯಿಂದ ಕೆಡಿಸಿಸಿ ಬ್ಯಾಂಕ್ ವ್ಯವಹಾರದ ಮೇಲೂ ಪರಿಣಾಮ ಬೀರಿತ್ತು. ಬ್ಯಾಂಕ್‌ಗೆ ಬರುವ ಗ್ರಾಹಕರನ್ನು ಪ್ರತಿಭಟನೆಯ ನೆಪದಲ್ಲಿ ವಾಪಸ್ ಕಳುಹಿಸುವ ಕಾರ್ಯವನ್ನು ರೈತರು ಮಾಡಿದರು. ಇದರಿಂದ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಯಿತು. ಈ ಸಂಬಂಧ ಬ್ಯಾಂಕ್ ಖಾತೆದಾರರು ಮತ್ತು ರೈತರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವ ಕಾರ್ಯ ಮಾಡಿದರು.

ಬಳಿಕ ಬ್ಯಾಂಕ್ ಮ್ಯಾನೇಜರ್ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅವರೊಂದಿಗೆ ಚರ್ಚಿಸಿ, ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಿ ಎಂದು ತಿಳಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎನ್ ಎನ್ ಹೆಗಡೆ ಅವರು ರೈತರನ್ನು ಸಮಧಾನ ಪಡಿಸಿದರು. ಬರಗದ್ದೆ ಸೊಸೈಟಿಯ ಅಧ್ಯಕ್ಷ ಮಾದೇವ ಗೌಡ ಅವರನ್ನು ಬ್ಯಾಂಕ್‌ಗೆ ಕರೆಯಿಸಿದ ಸಹಾಯಕ ನಿಬಂಧಕರು ಈ ಪ್ರಕರಣವನ್ನು ಶೀಘ್ರ ಇತ್ಯರ್ಥ ಪಡಿಸಿ, ಇಲ್ಲವೇ ಸೊಸೈಟಿಯ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು ರಾಜೀನಾಮೆ ನೀಡುವ ಮೂಲಕ ಆಡಳಿತ ಸಮಿತಿಯನ್ನು ವಿಸರ್ಜಿಸಿ. ನಂತರ ಕಾನೂನು ಪ್ರಕಾರ ಪ್ರಕರಣವನ್ನು ನಾವೇ ಇತ್ಯರ್ಥ ಪಡಿಸುತ್ತೆÃವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಎಆರ್ ಅವರ ಖಡಕ್ ಎಚ್ಚರಿಕೆಯಿಂದ ತಬ್ಬಿಬ್ಬಾದ ಬರಗದ್ದೆ ಸೊಸೈಟಿ ಅಧ್ಯಕ್ಷ ಮಾದೇವ ಗೌಡ ಆಗಸ್ಟ್ ೨೯ರಂದು ಕಾರ್ಯದರ್ಶಿ ಅವರನ್ನು ಕರೆಯಿಸಿ, ಪ್ರಕರಣ ಇತ್ಯರ್ಥ ಪಡಿಸುವುದಾಗಿ ಸ್ಪಷ್ಟ ಪಡಿಸಿದರು. ಬಾಯ್ ಮಾತಲ್ಲಿ ಹೇಳಿದರೆ ನಾವು ಕೇಳುವುದಿಲ್ಲ. ಲಿಖಿತವಾಗಿ ಸ್ಪಷ್ಟಪಡಿಸಿ ಎಂದು ರೈತರು ಒತ್ತಾಯಿಸಿದ ಬಳಿಕ ಸೊಸೈಟಿ ಅಧ್ಯಕ್ಷರು ಲಿಖಿತವಾಗಿ ಹೇಳಿಕೆ ನೀಡಿದ ನಂತರ ಪ್ರತಿಭಟನೆ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗಜಾನನ ಪೈ, ಬಿಜೆಪಿ ಮುಖಂಡ ಜಿ ಆಯ್ ಹೆಗಡೆ, ಕಾಂಗ್ರೆಸ್ ಮುಖಂಡರಾದ ತಾರಾ ಗೌಡ, ವೀಣಾ ನಾಯಕ, ಬರಗದ್ದೆ ಹಾಗೂ ಯಲವಳ್ಳಿ ಭಾಗದ ನೂರಾರು ರೈತರು ಉಪಸ್ಥಿತರಿದ್ದರು.

loading...