ಶಿವಕುಮಾರ್ ನೋವಿಗೆ ಮರುಗಿದ ಶ್ರೀರಾಮುಲು: ಕೈ ಮುಗಿದು ಕ್ಷಮೆ ಕೋರಿದ ಆರೋಗ್ಯ ಸಚಿವ

0
11

ಚಿತ್ರದುರ್ಗ:- “ಡಿ ಕೆ ಶಿವಕುಮಾರ್ ಅಣ್ಣ ನನ್ನನ್ನು ಕ್ಷಮಿಸಿ, ನಾನು ಕೈ ಮುಗಿದು ಕೇಳುತ್ತೇನೆ, ಈ ವಿಚಾರದಲ್ಲಿ ನಾನು ಟೀಕೆ ಮಾಡುವುದಿಲ್ಲ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಕ್ಷಮೆ ಕೋರಿದ್ದಾರೆ.ಅಕ್ರಮ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಿರುವ ಡಿ ಕೆ ಶಿವಕುಮಾರ್​ ಅವರು ಸೋಮವಾರ ಮಾಧ್ಯಮದ ಮುಂದೆ ಕಣ್ಣೀರು ಹಾಕಿ, ಕೆಲವರು ‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂದು ಹೇಳಿದ್ದಾರೆ, ಇರಲಿ ಎಂದು ಹೇಳಿ ಕಣ್ಣೀರು ಹಾಕಿದ್ದರು.
ಇದರಿಂದ ಕರಗಿರುವ ಶ್ರೀರಾಮುಲು ಇಂದು ಶಿವಕುಮಾರ್ ಅವರಿಂದ ಕ್ಷಮೆ ಕೋರಿದ್ದಾರೆ.

ಶಿವಕುಮಾರ್ ಅವರು ಕೆಣಕಿ ಮಾತನಾಡುತ್ತಿದ್ದರು, ನಾನು ಕೂಡ ಅವರನ್ನು ಕೆಣಕುವ ರೀತಿಯಲ್ಲಿ ಮಾತನಾಡಿದ್ದೆ. ನಾನು ಮನಸ್ಸಿನಿಂದ ಯಾವ ಮಾತು ಕೂಡಾ ಆಡಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು, ವೈಯಕ್ತಿಕವಾಗಿ ಅಲ್ಲ. ದಯವಿಟ್ಟು ಅಣ್ಣನವರೇ ನನ್ನ ಕ್ಷಮಿಸಿ ಎಂದು ರಾಮುಲು ಕ್ಷಮೆಯಾಚಿಸಿದ್ದಾರೆ.
ಕಾನೂನು ಏನು ಕೆಲಸ ಮಾಡಬೇಕೋ ಅದು ಮಾಡುತ್ತದೆ. ಅವರು ಕಷ್ಟದಲ್ಲಿದ್ದು, ಕಣ್ಣೀರು ಹಾಕುವ ವೇಳೆ ಚುಚ್ಚು ಮಾತನಾಡಿದರೆ ನೋವಾಗುತ್ತದೆ. ನಾನು ಅವರ ಬಗ್ಗೆ ಯಾವುದೇ ಟೀಕೆ ಮಾಡುವುದಿಲ್ಲ, ಡಿಕೆಶಿ ಅಣ್ಣನ ಕುರಿತು ರಾಜಕೀಯವಾಗಿ ಮಾತ್ರ ಮಾತನಾಡುತ್ತೇನೆ, ನನ್ನ ಮಾತಿಂದ ಶಿವಕುಮಾರ್ ಅವರಿಗೆ ನೋವಾಗಿದ್ದರೆ, ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಶ್ರೀರಾಮುಲು ಇಂದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಹೇಳಿ, ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಶ್ರೀರಾಮುಲು, ಶಿವಕುಮಾರ್ ​ ರಾಜಕಾರಣಿ ಹೊರತಾಗಿ ಓರ್ವ ಉದ್ಯಮಿ. ಐಟಿ ದಾಳಿ ವೇಳೆ ಅವರು ಪೇಪರ್​ ಹರಿದು ಹಾಕಿರುವ ಘಟನೆ ಎಲ್ಲರಿಗೂ ನೆನಪಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ತಪ್ಪಾಗಿದ್ದರೆ ಶಿಕ್ಷೆಯಾಗಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ನನ್ನ ಮಿತ್ರರು ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ. ನಾನು ಉಪ್ಪು ತಿಂದರೆ ನೀರು ಕುಡಿಯಲು ಸಿದ್ಧ ಎಂದು ಶಿವಕುಮಾರ್​ ಬೇಸರ ವ್ಯಕ್ತಪಡಿಸಿದ್ದರು.
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡುವಾಗ ಕುಟುಂಬದವರನ್ನು ನೆನೆದು ಅವರು ಗಳಗಳನೆ ಅತ್ತಿದ್ದರು. “ನಾನು, ನನ್ನ ಮಗ ಪ್ರತೀವರ್ಷ ಸ್ಯಾಂಕಿ ಕೆರೆಯಲ್ಲಿ ಗಣೇಶನನ್ನು ಬಿಡುತ್ತಿದ್ದೆವು. ತಂದೆಗೆ ಎಡೆ ಇಡೋದಕ್ಕೂ ಬಿಡದೆ ದೌರ್ಜನ್ಯ​ ಕೊಡುತ್ತಿದ್ದಾರೆ ಎಂದು ಅಳುತ್ತಲೇ ಅವರು ಇಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಶ್ರೀರಾಮುಲು ಕೂಡ ಶಿವಕುಮಾರ್ ಅವರ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿ, ಕ್ಷಮೆ ಕೋರಿದ್ದಾರೆ.
ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡಿದ್ದಾರೆ, ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಕನಸು ನನಸಾಗುವುದಿಲ್ಲ ಎಂದು ಟೀಕಿಸಿದರು.

loading...