ಡಿ.ಕೆ.ಶಿವಕುಮಾರ್ ಬಂಧನ ಕಾನೂನುಬಾಹಿರ: ಸಿದ್ದರಾಮಯ್ಯ

0
12

ಬೆಂಗಳೂರು:- ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ಬಂಧನ ಕಾನೂನುಬಾಹಿರವಾಗಿದ್ದು, ಅವರ ಬಂಧನ ರಾಜಕೀಯ ಸೇಡಿನ ಕ್ರಮ ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಗಾರರಿಗೆ, ದರೋಡೆಕೋರರಿಗೆ, ಸಾಕ್ಷ್ಯ ನಾಶ ಮಾಡುವವರಿಗೆ ಶಿಕ್ಷೆ ವಿಧಿಸಿ ದಸ್ತಗಿರಿ ಮಾಡಬೇಕು. ಆದರೆ ತಪ್ಪು ಮಾಡದೇ ಇರುವವರನ್ನು ಬಂಧಿಸುವುದು ಎಂದರೆ, ರಾಜಕೀಯಪ್ರೇರಿತ, ದ್ವೇಷವೇ ಕಾರಣ. ಸಮನ್ಸ್ ಗೆ ಹಾಜರಾದರೂ ಸಹ ಶಿವಕುಮಾರ್ ಅವರನ್ನು ಬಂಧಿಸಿರುವುದು ಯಾವ ನ್ಯಾಯ ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಾಗಲೆಲ್ಲ ಡಿ.ಕೆ‌.ಶಿವಕುಮಾರ್ ಹಾಜರಾಗಿದ್ದಾರೆ. ಹಬ್ಬದ ದಿನವೂ ಅವರನ್ನೂ ಬಿಟ್ಟಿಲ್ಲ. ತಂದೆಗೆ ಎಡೆ ಹಾಕದೇ ಇರುವುದಕ್ಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರೊಂದಿಗೆ ಬಹಳ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ನಾಲ್ಕು ದಿನವೂ ವಿಚಾರಣೆಗೆ ಅವರು ಹಾಜರಾಗಿದ್ದರಾದರೂ ಅವರನ್ನು ಬಂಧಿಸಿರುವುದು
ಸಂಪೂರ್ಣ ರಾಜಕೀಯ ಸೇಡಿನ ಕ್ರಮ. ಈ ನಡೆಯನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ‌. ಶಿವಕುಮಾರ್ ಅವರಿಗಾಗಿರುವ ಅನ್ಯಾಯದ ವಿರುದ್ಧ ಪಕ್ಷದ ವತಿಯಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು. ಅದರೊಂದಿಗೆ ರಾಜಕೀಯವಾಗಿ, ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು. ಶಿವಕುಮಾರ್ ಅವರ ಬಂಧನದಿಂದ ಧೃತಿಗೆಡುವುದಿಲ್ಲ. ನಮ್ಮನ್ನು ಈ ರೀತಿಯಾಗಿ ಹೆದರಿಸುತ್ತೇವೆ ಎಂದು ಬಿಜೆಪಿ ಭಾವಿಸಿದ್ದರೆ ಅದು ತಪ್ಪು. ತಾವೆಲ್ಲಾ ಶಿವಕುಮಾರ್ ಅವರ ಬೆಂಬಲಕ್ಕೆ ಇರುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಸೆ. 7 ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ್ಯದಲ್ಲಿ ಭಾರೀ ಪ್ರವಾಹ ತಲೆದೋರಿದಂತಹ ಸಂದರ್ಭದಲ್ಲಿ ಭೇಟಿ ನೀಡದ ಅವರು ಇದೀಗ ಪ್ರವಾಹ ತಗ್ಗಿದ ಬಳಿಕ ಭೇಟಿ ಕೊಡುತ್ತಿದ್ದಾರೆ ಎಂದರೆ ಏನು ಅರ್ಥ ? ಈಗಲಾದರೂ ಬಿಜೆಪಿಯ ಸಂಸದರು ಪ್ರಧಾನಿ ಅವರನ್ನು ಭೇಟಿ ಮಾಡಿ ನೆರೆ ಬರ ಸಂತ್ರಸ್ತರ ಬಗ್ಗೆ ಮಾತನಾಡಲಿ, ಕೇಂದ್ರದಿಂದ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಕಾಂಗ್ರೆಸ್ ಹಿರಿಯರ ಸಭೆ
ಡಿ.ಕೆ.ಶಿವಕುಮಾರ್ ಬಂಧನ ಹಿನ್ನೆಲೆಯಲ್ಲಿ ಪಕ್ಷ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಇಂದು ಸಂಜೆ ರಾಜ್ಯ ಹಿರಿಯ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಶಿವಕುಮಾರ್ ಬಂಧನದ ಹಿಂದೆ ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣವಿದ್ದು, ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವ ಬಗ್ಗೆ ಹಾಗೂ ರಾಜ್ಯವ್ಯಾಪಿ ಹೋರಾಟವನ್ನು ಯಾವ ರೀತಿ ಆಯೋಜಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ‌. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮುಖಂಡರಾದ ಡಾ.ಜಿ. ಪರಮೇಶ್ವರ್, ಕೆ ಹೆಚ್ ಮುನಿಯಪ್ಪ ಸೇರಿದಂತೆ ಇತರೆ ನಾಯಕರು ಸೇರುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

loading...