ವಿರಾಟ್ ಕೊಹ್ಲಿ ಅವರನ್ನು ಗುಣಗಾನ ಮಾಡಿದ ದೀಪಕ್‌ ಚಾಹರ್‌

0
5

ಮೊಹಾಲಿ:- ಅಜೇಯ ಅರ್ಧ ಶತಕ ಸಿಡಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಭಾರತದ ಗೆಲುವಿಗೆ ಕಾರಣರಾದ ನಾಯಕ ವಿರಾಟ್ ಕೊಹ್ಲಿ ಅವರನ್ನು ಯುವ ವೇಗಿ ದೀಪಕ್‌ ಚಾಹರ್‌ ಗುಣಗಾನ ಮಾಡಿದ್ದಾರೆ.
ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ 149 ರನ್‌ ಗಳಿಸಿತ್ತು. ಇದಕ್ಕೆ ಉತ್ತರ ನೀಡಿದ ಭಾರತ ತಂಡ, ನಾಯಕ ವಿರಾಟ್‌ ಕೊಹ್ಲಿ ಅವರ ಅಜೇಯ 72 ರನ್‌ಗಳ ನೆರವಿನಿಂದ ಮೂರು ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ ಮೂರು ಪಂದ್ಯಗಳ ಚುಟುಕು ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
ಅಮೋಘ ಬ್ಯಾಟಿಂಗ್‌ ಮಾಡಿದ ನಾಯಕ ವಿರಾಟ್‌ ಕೊಹ್ಲಿ 52 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 72 ರನ್‌ ಸಿಡಿಸಿದರು. ಆ ಮೂಲಕ ಟಿ-20 ಕ್ರಿಕೆಟ್‌ನಲ್ಲಿ 2,441 ರನ್‌ ಪೂರೈಸಿದರು. ಅಲ್ಲದೇ, ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಭಾಜನರಾಗುವ ಮೂಲಕ ಸಹ ಆಟಗಾರ ರೋಹಿತ್‌ ಶರ್ಮಾ(2,434 ರನ್‌) ಅವರ ದಾಖಲೆ ಹಿಂದಿಕ್ಕಿದರು. ಜತೆಗೆ, ಟೆಸ್ಟ್‌, ಏಕದಿನ ಹಾಗೂ ಟಿ-20 ಮೂರೂ ಮಾದರಿಯಲ್ಲಿ ಶೇ. 50 ರಷ್ಟು ಸರಾಸರಿ ಹೊಂದಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ದೀಪಕ್‌ ಚಾಹರ್‌, ” ನಾಯಕ ವಿರಾಟ್‌ ಕೊಹ್ಲಿ ಯಾವ ರೀತಿ ಸ್ಥಿರ ಪ್ರದರ್ಶನ ತೋರಲಿದ್ದಾರೆಂಬುದು ನನಗೆ ಗೊತ್ತಿಲ್ಲ. ಆದರೆ, ಖಂಡಿತ ಅವರು ಮುಂದಿನ ಹಂತದ ಆಟಗಾರ ಎಂದು ಗುಣಗಾನ ಮಾಡಿದರು.
ನಾಲ್ಕು ಓವರ್‌ಗಳಲ್ಲಿ 22 ರನ್‌ ನೀಡಿ ಎರಡು ವಿಕೆಟ್‌ ಕಿತ್ತ ಚಾಹರ್‌, ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿ, 30 ಅಡಿ ವೃತ್ತದಿಂದ ಹೊರಗಡೆ ಹೆಚ್ಚುವರಿ ಫೀಲ್ಡರ್‌ಗಳು ಇರುವುದರಿಂದ ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ಮಾಡುವುದು ಸುಲಭ ಎಂದರು.
” ಪವರ್‌ ಪ್ಲೇನಲ್ಲಿ ಕೇವಲ ಇಬ್ಬರು ಆಟಗಾರರು ಮಾತ್ರ 30 ಗಜದಿಂದ ಹೊರಗಡೆ ಫೀಲ್ಡಿಂಗ್‌ ಮಾಡುತ್ತಾರೆ. ಆದರೆ, ಡೆತ್‌ ಓವರ್‌ನಲ್ಲಿ ಹೆಚ್ಚುವರಿ ಆಟಗಾರರು ಫೀಲ್ಡಿಂಗ್‌ ಮಾಡುವುದದಿಂದ ಪವರ್‌ಪ್ಲೇ ಗಿಂತ ಡೆತ್‌ ಓವರ್‌ಗಳಲ್ಲಿ ಬೌಲಿಂಗ್‌ ಸುಲಭ ಎಂದು ತಿಳಿಸಿದರು.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್‌ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತಿರಿಸಿದ ಚಾಹರ್‌, ” ಚುಟುಕು ವಿಶ್ವಕಪ್‌ಗೆ ಇನ್ನೂ ಹೆಚ್ಚು ಸಮಯವಿದೆ. ಹಾಗಾಗಿ, ಇದರ ಬಗ್ಗೆ ನಾನು ಇನ್ನೂ ಚಿಂತಿಸಿಲ್ಲ. ಪ್ರತಿಯೊಂದು ಪಂದ್ಯ ನನ್ನ ಕೊನೆಯ ಪಂದ್ಯ ಎಂದುಕೊಂಡು ಆಡುತ್ತೇನೆ ಎಂದು ದೀಪಕ್‌ ಚಾಹರ್‌ ಹೇಳಿದರು.
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೂರನೇ ಪಂದ್ಯ ಭಾನುವಾರ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

loading...