ಎಲ್ಗರ್, ಡಿ ಕಾಕ್ ಶತಕ: ಭಾರತಕ್ಕೆ ತಿರುಗೇಟು ನೀಡಿದ ಆಫ್ರಿಕಾ

0
20

ವಿಶಾಖಪಟ್ಟಣಂ:- ಡೀನ್ ಎಲ್ಗರ್ (160 ರನ್, 287 ಎಸೆತಗಳು) ಹಾಗೂ ಕ್ವಿಂಟನ್ ಡಿ ಕಾಕ್ (11 ರನ್, 163 ಎಸೆತಗಳು) ಅವರ ಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಭಾರತಕ್ಕೆ ಪ್ರಬಲ ಪೈ ಪೋಟಿ ನೀಡಿದೆ.
ಇಲ್ಲಿನ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮೂರು ವಿಕೆಟ್ ಕಳೆದುಕೊಂಡು 39 ರನ್‍ಗಳಿಂದ ಪ್ರಥಮ ಇನಿಂಗ್ಸ್ ಆರಂಭಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನದ ಮುಕ್ತಾಯಕ್ಕೆ 118 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 385 ರನ್ ದಾಖಲಿಸಿದೆ. ಇನ್ನೂ, 117 ರನ್ ಹಿನ್ನಡೆಯಲ್ಲಿದೆ.
39 ರನ್‍ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಡೀನ್ ಎಲ್ಗರ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ತಂಡಕ್ಕೆ ಆಸರೆಯಾದರು. ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿಯು ಮುರಿಯದ ಐದನೇ ವಿಕೆಟ್‍ಗೆ 115 ರನ್ ಗಳಿಸಿತು. ಆ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು.
ಡೀನ್ ಎಲ್ಗರ್ ಜತೆ ಮತ್ತೊಂದು ತುದಿಯಲ್ಲಿ ಹೆಗಲು ನೀಡಿದ್ದ ನಾಯಕ ಫಾಫ್ ಡುಪ್ಲೆಸಿಸ್ ಅವರು ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. 103 ಎಸೆತಗಳನ್ನು ಎದುರಿಸಿದ ಅವರು ಒಂದು ಸಿಕ್ಸ್ ಹಾಗೂ ಎಂಟು ಬೌಂಡರಿಯೊಂದಿಗೆ 55 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವಲ್ಲಿ ನೆರವಾದರು. ಅರ್ಧ ಶತಕ ಸಿಡಿಸಿ ಬ್ಯಾಟಿಂಗ್ ಮುಂದುವರಿಸಿದ್ದ ಅವರನ್ನು ಆರ್. ಅಶ್ವಿನಿ ಕೆಡವಿದರು.
ಎಲ್ಗರ್-ಡಿ ಕಾಕ್ ಜುಗಲ್‍ಬಂದಿ: ತಂಡದ ಮೊತ್ತ 178 ರನ್‍ಗಳಿಗೆ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದಾಗ ಜತೆಯಾದ ಡೀನ್ ಎಲ್ಗರ್ ಹಾಗೂ ಕ್ವಿಂಟನ್ ಡಿ ಕಾಕ್ ಜೋಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿತು. ಈ ಜೋಡಿ ಕಡಲ ತೀರದ ಪಿಚ್‍ನ ಸ್ವರೂಪವನ್ನು ಅರ್ಥ ಮಾಡಿಕೊಂಡು ಬ್ಯಾಟಿಂಗ್ ಮಾಡಿತು. ಆರನೇ ವಿಕೆಟ್‍ಗೆ ಈ ಜೋಡಿ ದೀರ್ಘ ಕಾಲ ಕ್ರೀಸ್‍ನಲ್ಲಿ ಸಮಯ ಕಳೆಯಿತು. ಇವರಿಬ್ಬರ ಅದ್ಭುತ ಜತೆಯಾಟದಿಂದ ಮೂಡಿಬಂದ 164 ರನ್‍ಗಳ ಸಹಾಯದಿಂದ ದಕ್ಷಿಣ ಆಫ್ರಿಕಾ ಮೊತ್ತ 300 ರಗಡಿ ದಾಟಲು ಸಾಧ್ಯವಾಯಿತು.
ಆರಂಭಿಕನಾಗಿ ಕ್ರೀಸ್‍ಗೆ ಬಂದಾಗಿನಿದಲೂ ಸೊಗಸಾಗಿ ಬ್ಯಾಟಿಂಗ್ ಮಾಡಿದ ಡೀನ್ ಎಲ್ಗರ್ ಅವರು ಭಾರತದ ಬೌಲರ್ ಗಳನ್ನು ಹೆಚ್ಚು ಹೊತ್ತು ಕಾಡಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮಾಡಿದರು. 287 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಸಿಕ್ಸರ್ ಹಾಗೂ 18 ಬೌಂಡರಿಯೊಂದಿಗೆ 160 ರನ್ ಸಿಡಿಸಿದರು. ವೃತ್ತಿ ಜೀವನದ 12ನೇ ಶತಕ ಸಿಡಿಸುವ ಮೂಲಕ ನೆರೆದಿದ್ದ ಅಪಾರ ಅಭಿಮಾನಿಗಳ ಪ್ರೀತಿಗೆ ಎಲ್ಗರ್ ಭಾಜನರಾದರು. ನಂತರ, ಅವರು ರವೀಂದ್ರ ಜಡೇಜಾ ಎಸೆತದಲ್ಲಿ ಚೇತೇಶ್ವರ ಪೂಜಾರ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‍ಗೆ ತೆರಳಿದರು.
ಡೀನ್ ಎಲ್ಗರ್ ಗೆ ಹೆಚ್ಚು ಹೊತ್ತು ಒಂದು ತುದಿಯಲ್ಲಿ ಸಾಥ್ ನೀಡುತ್ತಿದ್ದ ಕ್ವಿಂಟನ್ ಡಿ ಕಾಕ್ ಕೂಡ ಅತ್ಯದ್ಭುತ ಬ್ಯಾಟಿಂಗ್ ಮಾಡಿದರು. 163 ಎಸೆತಗಳನ್ನು ಎದುರಿಸಿದ ಅವರು ಎರಡು ಸಿಕ್ಸರ್ ಹಾಗೂ 16 ಬೌಂಡರಿಯೊಂದಿಗೆ 111 ರನ್ ಗಳಿಸಿ ವೃತ್ತಿ ಜೀವನದ ಐದನೇ ಶತಕ ಸಿಡಿಸಿದರು.
ಒಟ್ಟಾರೆ, ಮೂರನೇ ದಿನದಾಟದಲ್ಲಿ ಡೀನ್ ಎಲ್ಗರ್, ಫಾಫ್ ಡುಪ್ಲೆಸಿಸ್ ಹಾಗೂ ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಬ್ಯಾಟಿಂಗ್ ಭಾರಿ ಅಂತರದ ಹಿನ್ನಡೆಯಿಂದ ಆಫ್ರಿಕಾ ಪಾರಾಯಿತು. ಇದೀಗ ಕ್ರೀಸ್‍ನಲ್ಲಿ ವೆರ್ನಾನ್ ಫಿಲೆಂಡರ್ ಹಾಗೂ ಕೇಶವ್ ಮಹರಾಜ್ ವಿಕೆಟ್ ಕಾಯ್ದುಕೊಂಡಿದ್ದಾರೆ.
ಆರ್.ರವಿಚಂದ್ರನ್ ಅಶ್ವಿನ್ ಐದು ವಿಕೆಟ್ ಗೊಂಚಲು ಪಡೆದುಕೊಂಡರು. ರವೀಂದ್ರ ಜಡೇಜಾ ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್: 502 (ಡಿ)
ದಕ್ಷಿಣ ಆಫ್ರಿಕಾ
ಪ್ರಥಮ ಇನಿಂಗ್ಸ್: 118 ಓವರ್ ಗಳಲ್ಲಿ 385/8 (ಡೀನ್ ಎಲ್ಗರ್ 160, ಕ್ವಿಂಟನ್ ಡಿ ಕಾಕ್ 111, ಫಾಫ್ ಡುಪ್ಲೆಸಿಸ್ 55; ಆರ್. ಅಶ್ವಿನ್ 128 ಕ್ಕೆ 5, ರವೀಂದ್ರ ಜಡೇಜಾ 116 ಕ್ಕೆ 2, ಇಶಾಂತ್ ಶರ್ಮಾ 44 ಕ್ಕೆ 1)

loading...