ತಿಹಾರ್ ಜೈಲಿನಲ್ಲಿ ಡಿ.ಕೆ‌.ಶಿವಕುಮಾರ್ ಭೇಟಿ ಮಾಡಿದ ಎಚ್.ಡಿ.ಕುಮಾರಸ್ವಾಮಿ

0
2

ನವದೆಹಲಿ:- ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಸೋಮವಾರ ಭೇಟಿ ಮಾಡಿದರು.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭೇಟಿಗೆ ಮುಂದಾಗುತ್ತಿದ್ದಾರೆ ಎನ್ನುವ ವಿಚಾರ ಹೊರಬೀಳುತ್ತಿದ್ದಂತೆಯೇ ಇತ್ತ ಕುಮಾರಸ್ವಾಮಿ ಸಹ ತಂದೆ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ನಿರ್ದೇಶನದ ಮೇರೆಗೆ ಡಿ.ಕೆ.ಶಿವಕುಮಾರ್ ಭೇಟಿಗೆ ದೆಹಲಿಗೆ ತೆರಳಿದರು.ನವದೆಹಲಿಯ ತಿಹಾರ್ ಜೈಲಿನಲ್ಲಿ ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಅವರು, ಇದೊಂದು ಸೌಹಾರ್ದಯುತ ಭೇಟಿ. ಶಿವಕುಮಾರ್ ಅವರು ಇಷ್ಟೆಲ್ಲದರ ನಡುವೆಯೂ ಧೈರ್ಯದಿಂದಲೇ ಇದ್ದು, ಮುಂದಿನ ಹೋರಾಟಕ್ಕೆ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ. ಭೇಟಿ ಸಂದರ್ಭದಲ್ಲಿ ಶಿವಕುಮಾರ್ ಎಲ್ಲ ತೊಡಕುಗಳನ್ನೂ ಎದುರಿಸಿ ಹೊರಬರುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ನೆರೆ ಪರಿಹಾರ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ರೀತಿಯ ಸೂಚನೆಯೇ ಇಲ್ಲ. ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಸರ್ಕಾರ ಕೈಚೆಲ್ಲಿ ಕೂರಬಾರದು. ನೆರೆ ಪರಿಹಾರ ನೀಡಲು ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆ ಹೊರಗಡೆ ಹೇಳಿಕೆ ನೀಡುತ್ತಾರೆ. ಆದರೆ ಅಧಿವೇಶನ ಸಂದರ್ಭದಲ್ಲಿ ಸದನದಲ್ಲಿ ಹಣದ ಸಮಸ್ಯೆ ಇಲ್ಲ ಎನ್ನುತ್ತಿದ್ದಾರೆ.‌ ನೆರೆ ಸಂತ್ರಸ್ತರಿಗೆ ಬದುಕು ಕಲ್ಪಿಸಿಕೊಡಬೇಕಾಗದಂತಹ ಮುಖ್ಯಮಂತ್ರಿ ಏಕೆ ಹೀಗೆ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ನೆರೆ ಪರಿಹಾರಕ್ಕೆ ರಾಜ್ಯ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಬಿಜೆಪಿ ನಾಯಕರು ನೆರೆ ಸಂತ್ರಸ್ತರ ಬಗ್ಗೆ ಗಮನವೇ ಹರಿಸುತ್ತಿಲ್ಲ. ನೆರೆ ಸಂತ್ರಸ್ತರ ಕಷ್ಟವನ್ನು ಆಲಿಸಲು ಬಿಜೆಪಿಯ ನಾಯಕರು ನೆರೆ ಪ್ರದೇಶಗಳಿಗೆ ಭೇಟಿ ಕೊಡುವುದಿಲ್ಲ. ಆದರೆ ರಾಜಕೀಯಕ್ಕಾಗಿ ಅಧಿಕಾರಕ್ಕಾಗಿ ಮಾತ್ರ ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದು ಕಿಡಿಕಾರಿದರು‌.

ವಿ‌.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ವಿಚಾರ ಕುರಿತು ತಾವು ಮಾತನಾಡುವುದಿಲ್ಲ. ಏಕೆಂದರೆ ಆಗ ತಾವು ಹುಟ್ಟಿಯೇ ಇರಲಿಲ್ಲ‌. ಸಾವರ್ಕರ್ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ಮಾಡುತ್ತಾರೆ‌‌. ಇಂಥ ವಿವಾದಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

loading...