ದನ, ಕುರಿ ಮಾರಾಟದಲ್ಲಿ‌ ಸಿದ್ದರಾಮಯ್ಯ ನಿಪುಣ: ಬಿ.ಸಿ.ಪಾಟೀಲ್ ತಿರುಗೇಟು

0
2

ಮೈಸೂರು:- ದನ, ಕುರಿ ಮಾರಾಟದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಪುಣ‌. ಅವರಿಗಿಂತ ಚೆನ್ನಾಗಿ ಬಲ್ಲವರು ಯಾರೂ ಇಲ್ಲ ಎಂದು ಹೇಳುವ ಮೂಲಕ ಹಿರೇಕೆರೂರು ಅನರ್ಹ ಶಾಸಕ ಬಿ.ಸಿ.ಪಾಟೀಲ್, ಶಾಸಕರನ್ನು ದನ, ಕುರಿ, ಕೋಳಿಗಳಂತೆ ಬಿಜೆಪಿಯವರು ಖರೀದಿ ಮಾಡಿದ್ದಾರೆ ಎಂದು ಟೀಕಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ಖರೀದಿಸಲು ನಾವು ದನ, ಕುರಿ, ಕೋಳಿಗಳಲ್ಲ. ಸಿದ್ದರಾಮಯ್ಯ ಅವರ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ನಲ್ಲಿ ನಮ್ಮನ್ನು ಹೇಗೆ ನಡೆಸಿಕೊಂಡರು ಎನ್ನುವುದರ ಬಗ್ಗೆ ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಾಗಿದ್ದರೆ 14 ಮಂದಿ ಪಕ್ಷದಿಂದ ಹೊರಬರುವ ಸಂದರ್ಭವೇ ಬರುತ್ತಿರಲಿಲ್ಲ ಎಂದರು.
ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ಒಂದೂ ದಿನವೂ ಸರಿಯಾಗಿ ನಡೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ತಮ್ಮ ಕುಟುಂಬಕ್ಕೆ ಮಾತ್ರ ಸೀಮಿತರಾದರು. ಪಕ್ಷದಲ್ಲಿ ನಮ್ಮ ಕಷ್ಟ – ಸುಖ ಕೇಳುವುದಕ್ಕೆ ಯಾರೂ ಇರಲಿಲ್ಲ. ಹಾಗಾಗಿಯೇ ನಾವೆಲ್ಲ‌ ದೃಢ ತೀರ್ಮಾನ ಮಾಡಬೇಕಾಯಿತು. ಈಗಲೂ ಸಹ‌ ನಾವೆಲ್ಲಾ ಒಟ್ಟಾಗಿಯೇ ಇದ್ದೇವೆ.‌ ಪರಿಸ್ಥಿತಿಯನ್ನು ಒಟ್ಟಾಗಿಯೇ ಎದುರಿಸುತ್ತೇವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ತಾಯಿಯಂತೆ ನಡೆದುಕೊಳ್ಳಲಿಲ್ಲ. ಉದ್ದೇಶಪೂರ್ವಕವಾಗಿ ನನಗೆ ಮಂತ್ರಿ ಸ್ಥಾನ ಕೈತಪ್ಪುವಂತೆ ಮಾಡಿದರು. ಅನರ್ಹ ಶಾಸಕರು ಕಾಂಗ್ರೆಸ್ ಬಿಡಲು ಕಾರಣವೇನು ಎಂಬುದನ್ನು ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಆರಂಭದ ದಿನಗಳಲ್ಲಿ ಬಿಜೆಪಿ ನಮಗೆ ಆಸೆ ಆಮಿಷಗಳನ್ನು ಒಡ್ಡಿದ್ದರೂ ನಾವು ಪಕ್ಷ ಬಿಟ್ಟಿರಲಿಲ್ಲ. ಆದರೆ 1 ವರ್ಷ 2 ತಿಂಗಳು ಕಾದು ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮ‌ ನಿರ್ಧಾರದ ಹಿಂದೆ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಹಿತ ಚಿಂತನೆ ಇದೆ. ಸಮ್ಮಿಶ್ರ ಸರ್ಕಾರದಿಂದ ಸಮಗ್ರ ಅಭಿವೃದ್ಧಿ ಸಾಧ್ಯವಿರಲಿಲ್ಲ. ಬಿಜೆಪಿ ಸರ್ಕಾರದಲ್ಲಿ ನಾವು ನಿರೀಕ್ಷಿಸಿದಂತೆ ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ಸಿಗುತ್ತಿದೆ. ನನ್ನದೇ ಕ್ಷೇತ್ರಕ್ಕೆ ಮೆಡಿಕಲ್‌ ಕಾಲೇಜು ಮಂಜೂರಾಗಿದೆ. ಬಹು‌ ದಿನಗಳ ಕನಸಾಗಿದ್ದ ಏತ ನೀರಾವರಿ ಯೋಜನೆ ಜಾರಿಗೆ ಬರುತ್ತಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಶಯ‌ ಕೂಡ ಈಡೇರುತ್ತಿದೆ ಎಂದು ಅನರ್ಹ ಶಾಸಕ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದರು.

ಬುಧವಾರ ಸುಪ್ರೀಂಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಹೊರ ಬೀಳುವ ವಿಶ್ವಾಸವಿದೆ. 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ನಿಲುವು ಸಂವಿಧಾನ ಬಾಹಿರವಾದುದು. ಸ್ಪೀಕರ್ ಸಾಮಾಜಿಕ ನ್ಯಾಯ ಪಾಲಿಸಿಲ್ಲ. ಇದೇ ಕಾರಣದಿಂದಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ. ಬುಧವಾರ ತೀರ್ಪು ಹೊರ ಬೀಳುತ್ತಿರುವುದರಿಂದ ಬಹುತೇಕ ಅನರ್ಹ ಶಾಸಕರು ದೆಹಲಿಗೆ ಹೋಗಿದ್ದು, ನಮ್ಮ ಪರವಾಗಿಯೇ ತೀರ್ಪು ಬರುವ ವಿಶ್ವಾಸವಿದೆ. ಆದರೆ ನನ್ನ ಸ್ವಕ್ಷೇತ್ರದಲ್ಲಿ ಭಾರೀ ಮಳೆಯಾಗಿ ಹಾನಿ ಸಂಭವಿಸಿದೆ. ಹಾಗಾಗಿ ನಾನು ದೆಹಲಿಗೆ ಹೋಗುತ್ತಿಲ್ಲ. ಮೈಸೂರಿನಿಂದ ನೇರವಾಗಿ ಮತ ಕ್ಷೇತ್ರಕ್ಕೆ ಹೋಗುತ್ತೇನೆ. ಉಪ ಚುನಾವಣೆಯಲ್ಲಿ ನಾನು ಖಂಡಿತ ಗೆಲ್ಲುತ್ತೇನೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ ಎಂದು ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

loading...