ನಾಳೆಯಿಂದ ಭಾರತ-ಬಾಂಗ್ಲಾ ನಡುವೆ ಮೊದಲನೇ ಟೆಸ್ಟ್

0
5

ಇಂದೋರ್: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿರುವ ಭಾರತ ತಂಡ, ನಾಳೆಯಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಉಭಯ ತಂಡಗಳ ಮೊದಲನೇ ಹಣಾಹಣಿ ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಟೀಮ್ ಇಂಡಿಯಾ, ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಯನ್ನು ಯಶಸ್ವಿಯಾಗಿ ಮುಗಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಟ್ಟಿಯಲ್ಲಿ ಪ್ರಾಬಲ್ಯ ಮುಂದುವರಿಸುವ ಯೋಜನೆ ಹಾಕಿಕೊಂಡಿದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯಲ್ಲಿ ಪಿಂಕ್ ಚೆಂಡಿನಲ್ಲಿ ನಡೆಯುವ ಹೊನಲು ಬೆಳಕಿನ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದರೆ, ನಾಳಿನ ಪಂದ್ಯದಲ್ಲಿ ಉಭಯ ತಂಡಗಳು ಸಾಮಾನ್ಯವಾಗಿ ಕೆಂಪು ಚೆಂಡು ಮೂಲಕವೇ ಟೆಸ್ಟ್ ಸರಣಿ ಆರಂಭಿಸಲಿವೆ. ಟೆಸ್ಟ್ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ ಭಾರತ 240 ಅಂಕ ಕಲೆಹಾಕುವ ಮೂಲಕ ಅಗ್ರ ಸ್ಥಾನದಲ್ಲಿದೆ.
ಪ್ರವಾಸಿ ಬಾಂಗ್ಲಾ ವಿರುದ್ಧ ಚುಟುಕು ಸರಣಿಗೆ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ತವರು ನೆಲದಲ್ಲಿ ಭಾರತದ ವಿರುದ್ಧ ಪ್ರವಾಸಿಗರಿಗೆ ಕಠಿಣ ಸವಾಲು ಎದುರಾಗಲಿದೆ. ಕಳೆದ ಒಂದು ತಿಂಗಳು ಹಿಂದೆ ಹರಿಣಗಳ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಎರಡು ಶತಕ ಸಿಡಿಸಿದ್ದರು.

ಕಳೆದ ಸರಣಿಯಂತೆ ರೋಹಿತ್ ಶರ್ಮಾ ಹಾಗೂ ಮಯಾಂಕ ಅಗರ್ವಾಲ್ ಇನಿಂಗ್ಸ್ ಆರಂಭಿಸಲಿದ್ದು, ಈ ಜೋಡಿ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 829 ರನ್ ಜತೆಯಾಟವಾಡಿತ್ತು. ಇದೀಗ, ಬಾಂಗ್ಲಾ ವಿರುದ್ಧವೂ ಅದೇ ಲಯ ಮುಂದುವರಿಸುವ ತುಡಿತದಲ್ಲಿದೆ.
ಉಪ ನಾಯಕ ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರು ಕೂಡ ಉತ್ತಮ ಲಯದಲ್ಲಿ ಇದ್ದಾರೆ. ಬಲಿಷ್ಟ ಬ್ಯಾಟಿಂಗ್ ಲೈನ್ ಇರುವ ಭಾರತದ ಒತ್ತಡ ಹೇರುವುದು ಬಾಂಗ್ಲಾ ಬೌಲರ್‍ಗಳಿಗೆ ಕಷ್ಟವಾಗಬಹುದು. ರಿಷಭ್ ಪಂತ್ ಬದಲು ವೃದ್ದಿಮನ್ ಸಾಹ ಅವರೇ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇನ್ನೂ ಎದುರಾಳಿ ಬಾಂಗ್ಲಾದೇಶ ತಂಡ ಅನುಭವಿಗಳಾದ ಶಕಿಬ್ ಅಲ್ ಹಸನ್ ಹಾಗೂ ತಮೀಮ್ ಇಕ್ಬಾಲ್ ಅವರ ಅನುಪಸ್ಥಿಯಲ್ಲಿ ಆಡಲಿದ್ದು, ಬಹುತೇಕ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಟಿ-20 ಸರಣಿಯಲ್ಲಿ ಭಾರತಕ್ಕೆ ಕಠಿಣ ಪೈಪೋಟಿ ನೀಡಿದ್ದ ಬಾಂಗ್ಲಾದೇಶ ತಂಡ ಟೆಸ್ಟ್ ಸರಣಿಯಲ್ಲಿ ಮೊಮಿನುಲ್ ಹಕ್ ಅವರ ಸಾರಥ್ಯದಲ್ಲಿ ಉತ್ತಮ ಸವಾಲು ನೀಡುವ ಯೋಜನೆಯಲ್ಲಿದೆ. ಕಳೆದ ವರ್ಷ ಮೊಮಿನುಲ್ ಹಕ್ ಅವರು 15 ಇನಿಂಗ್ಸ್ ಗಳಲ್ಲಿ 673 ರನ್ ಗಳಿಸಿದ್ದರು. ಇದರಲ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದರು.
ಬಾಂಗ್ಲಾ ತಂಡದಲ್ಲಿ ಅನುಭವಿ ಮುಷ್ಪಿಕ್ಯೂರ್ ರಹೀಮ್ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ. ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಿರ್ವಹಿಸುವ ಜತೆಗೆ, ನಾಯಕ ಮೊಮಿನುಲ್‍ಗೆ ಸಾಥ್ ನೀಡುವ ಹೊಣೆಗಾರಿಕೆ ಇದೆ.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ, ವೃದ್ದಿಮನ್ ಸಾಹ (ವಿ.ಕೀ), ರವೀಂದ್ರ ಜಡೇಜಾ, ಆರ್. ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭಮನ್ ಗಿಲ್, ರಿಷಭ್ ಪಂತ್.

ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಅಲ್-ಅಮೀನ್ ಹುಸೇನ್, ಇಮ್ರುಲ್ ಕೇಯ್ಸ್, ಶದ್ಮನ್ ಇಸ್ಲಾಮ್, ಸೈಫ್ ಹಸನ್, ಮಹ್ಮುದುಲ್ಲಾ, ಮೊಸಾಡೆಕ್ ಹುಸೇನ್, ಮೆಹಡಿ ಹಸನ್, ಲಿಟಾನ್ ದಾಸ್, ಮುಷ್ಪಿಕ್ಯೂರ್ ರಹೀಮ್, ಮೊಹಮ್ಮದ್ ಮಿಥುನ್, ತೈಜುಲ್ ಇಸ್ಲಾಮ್, ನಯೀಮ್ ಹಸಮ್, ಮುಸ್ತಾಪಿಜೂರ್ ರಹಮನ್, ಎದಾಬತ್ ಹುಸೇನ್.
ಸಮಯ: ನಾಳೆ ಬೆಳಗ್ಗೆ 09:00
ಸ್ಥಳ: ಹೋಲ್ಕರ್ ಕ್ರೀಡಾಂಗಣ, ಇಂದೋರ್

loading...