ಪೊಲೀಸ್ ಭದ್ರಕೋಟೆಯಲ್ಲಿ ತರಕಾರಿ ಮಾರುಕಟ್ಟೆ ತೆರವು

0
35

ವಿಜಯಪುರ : ವಿಜಯಪುರದ ಗಾಂಧೀವೃತ್ತದ ಪಕ್ಕದಲ್ಲಿರುವ ರಸ್ತೆಗೆ ಹೊಂದಿಕೊAಡಿರುವ ನೆಹರೂ ಮಾರುಕಟ್ಟೆಯಲ್ಲಿದ್ದ ತರಕಾರಿಯ ಗೂಡಂಗಡಿಗಳನ್ನು ಗುರುವಾರ ತೆರವುಗೊಳಿಸಲಾಯಿತು.
ಪೊಲೀಸ್ ಬಿಗಿ ಭದ್ರತೆಯ ನಡುವೆ ನಸುಕಿನ ಆರು ಗಂಟೆಯ ಸುಮಾರಿಗೆ ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ನೇತೃತ್ವದ ಪಾಲಿಕೆ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿತು. ನೆಹರೂ ಮಾರುಕಟ್ಟೆಯಲ್ಲಿದ್ದ ತರಕಾರಿ ಮಾರುಕಟ್ಟೆಯ ಶೆಡ್, ಗೂಡಂಗಡಿ, ನಾಮಫಲಕಗಳನ್ನು ಮಹಾನಗರ ಪಾಲಿಕೆಯ ಜೆಸಿಬಿ ಯಂತ್ರಗಳು ಕಿತ್ತು ಬಿಸಾಕಿದವು. ಮಹಾನಗರ ಪಾಲಿಕೆಯ ನೂರಾರು ಪೌರಕಾರ್ಮಿಕರು ತೆರವುಗೊಳಿಸಿದ ಪತ್ರಾಸ್ ಶೆಡ್, ಪ್ಲೆಕ್ಸ್ ಮೊದಲಾದವುಗಳನ್ನು ತೆರವುಗೊಳಿಸಿ ಮಹಾನಗರ ಪಾಲಿಕೆಯ ಟ್ರಾö್ಯಕ್ಟರ್‌ಗೆ ತುಂಬಿದರು.
ನಸುಕಿನ ಜಾವದಲ್ಲಿಯೇ ಕಾರ್ಯಾಚರಣೆ ನಡೆಯುವ ಹಿನ್ನೆಲೆಯಲ್ಲಿ ಅಗತ್ಯ ಕಾರ್ಯಚಟುವಟಿಕೆಗಳನ್ನು ನಿನ್ನೆಯೇ ಮಹಾನಗರ ಪಾಲಿಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು.
ಪ್ರಸ್ತುತ ತರಕಾರಿ ವ್ಯಾಪಾರ ನಡೆಯುವ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಅದನ್ನು ಇಂಡಿ ರಸ್ತೆಯವರೆಗೆ ಸಂಪರ್ಕ ಕಲ್ಪಿಸಿ ನಗರದ ಹೃದಯ ಭಾಗದಲ್ಲಿ ಇನ್ನೊಂದು ಸಂರ್ಪಕ ರಸ್ತೆ ನಿರ್ಮಾಣದ ದೃಷ್ಟಿಯಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಾನೂನಿನ ನಿಯಮಾವಳಿಗಳನ್ನು ಪಾಲಿಸಿಯೇ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಶ್ರೀಹರ್ಷ ಶೆಟ್ಟಿ ವಿವರಿಸಿದರು. ಈಗಾಗಲೇ ಈ ಬಗ್ಗೆ ತರಕಾರಿ ವ್ಯಾಪಾರಸ್ಥರ ಸಭೆಯನ್ನೂ ಕರೆಯಲಾಗಿದ್ದು, ನೆಹರೂ ಮಾರುಕಟ್ಟೆಯಲ್ಲಿ ಕಾಯಿಪಲ್ಲೆ ವ್ಯಾಪಾರಕ್ಕೆಂದೆ ಸ್ಥಾಪಿಸಲ್ಪಟ್ಟ ಮಾರುಕಟ್ಟೆಯಲ್ಲಿ ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.

ಪೊಲೀಸ್ ಭದ್ರಕೋಟೆಯಲ್ಲಿ ಕಾರ್ಯಾಚರಣೆ
ನೆಹರೂ ಮಾರುಕಟ್ಟೆಯಲ್ಲಿರುವ ತರಕಾರಿ ಮಾರುಕಟ್ಟೆಯ ತೆರವು ಕಾರ್ಯಾಚರಣೆ ಬಿಗಿ ಪೊಲೀಸ ಭದ್ರಕೋಟೆಯಲ್ಲಿ ನಡೆಯಿತು. ಸ್ವತ: ಎಎಸ್‌ಪಿ ಬಿ.ಎಸ್. ನೇಮಿಗೌಡ ಸುರಕ್ಷತೆಯ ಉಸ್ತುವಾರಿ ವಹಿಸಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಮೂವರು ಡಿವೈಎಸ್‌ಪಿ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಡಿಆರ್ ಪೊಲೀಸ್ ತುಕಡಿ, ಮುಂಜಾಗೃತಾ ಕ್ರಮವಾಗಿ ರ‍್ಯಾಪಿಡ್ ಆಕ್ಷನ್ ಫೋರ್ಸ್ ವಾಹನ ಸೇರಿದಂತೆ ನೂರಾರು ಪೊಲೀಸರು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಇಡೀ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಸಹ ವಿಡೀಯೋ ಚಿತ್ರೀಕರಣ ನಡೆಸುತ್ತಿತ್ತು. ತಹಶೀಲ್ದಾರ ಮೋಹನಕುಮಾರಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಸ್ಥಳದಲ್ಲಿಯೇ ಇದ್ದರು.

ವ್ಯಾಪಾರಸ್ಥರಿಂದ ಧರಣಿ
ಅಂಗಡಿ, ಶೆಡ್ ಹಾಗೂ ಗೂಡಂಗಡಿಗಳನ್ನು ಕಳೆದುಕೊಂಡ ವ್ಯಾಪಾರಸ್ಥರು ಕಣ್ಣೀರು ಸುರಿಸಿ ಅಳಲು ತೋಡಿಕೊಂಡರು. ನಂತರ ಮಾರುಕಟ್ಟೆಯ ಪ್ರವೇಶಿಸುವ ಸ್ಥಳದಲ್ಲಿಯೇ ಜಮಾಯಿಸಿದ ನೂರಾರು ವ್ಯಾಪಾರಸ್ಥರು ಅಲ್ಲಿಯೇ ಧರಣಿ ಸತ್ಯಾಗ್ರಹ ಆರಂಭಿಸಿ ಮೌನವಾಗಿ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಯ ಧೋರಣೆಯನ್ನು ಖಂಡಿಸಿದರು. ಪರ್ಯಾಯ ಜಾಗ ಕಲ್ಪಿಸದೇ ಏಕಾಏಕಿಯಾಗಿ ಮಾರುಕಟ್ಟೆ ತೆರವುಗೊಳಿಸಿದರಿಂದ ನಮಗೆ ದಿಕ್ಕು ತೋಚದಂತಾಗಿದೆ, ನಮ್ಮ ಉಪಜೀವನ ನಡೆಯುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡರು.
ಕಾಂಗ್ರೆಸ್ ಮುಖಂಡ ಅಬ್ದುಲ್‌ಹಮೀದ್ ಮುಶ್ರೀಪ್, ಅಬ್ದುಲ್‌ರಜಾಕ ಹೊರ್ತಿ, ನ್ಯಾಯವಾದಿ ಸೈಯ್ಯದ್‌ಆಸೀಫುಲ್ಲಾ ಖಾದ್ರಿ, ಸಲೀಂ ಮುಂಡೇವಾಡಿ, ಫಯಾಜ್ ಕಲಾದಗಿ, ಇರ್ಫಾನ್ ಶೇಖ, ಮೈಣುದ್ದೀನ್ ಬೀಳಗಿ ಮೊದಲಾದವರು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ನಂತರ ಈ ಎಲ್ಲ ಮುಖಂಡರ ನೇತೃತ್ವದಲ್ಲಿ ತರಕಾರಿ ವ್ಯಾಪಾರಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

loading...