ಏಕಾಏಕಿ ಭೂಕುಸಿತ: ಪ್ರಾಣಾಪಾಯದಿಂದ ಪಾರಾದಾ ಮಕ್ಕಳು

0
14

ನರಗುಂದ: ಪಟ್ಟಣದ ಕಸಬಾ ಬಡಾವಣೆ ಮನೆವೊಂದರಲ್ಲಿ ಶುಕ್ರವಾರ ಏಕಾಏಕಿ ಭೂಕುಸಿತ ಸಂಭವಿಸಿದ ಪರಿಣಾಮ ಮನೆಯೊಳಗೆ ಮಲಗಿದ್ದ ಮೂವರು ಮಕ್ಕಳು ಸೇರಿ ಒಟ್ಟು ೫ ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಸಬಾ ಬಡಾವಣೆಯ ಕಾಶಪ್ಪ ತಿಮ್ಮಪ್ಪ ಗುಡದನ್ನವರ ಎಂಬುವರ ಮನೆಯಲ್ಲಿ ಈ ಭೂಕುಸಿತ ಸಂಭವಿಸಿದೆ. ಗುರುವಾರ ಎಂದಿನAತೆ ರಾತ್ರಿ ಊಟ ಮುಗಿಸಿಕೊಂಡು ತಮ್ಮ ಪತ್ನಿ ರೇಣವ್ವ, ಪುತ್ರಿ ಶೈಲಾ (೧೧), ಪುತ್ರರಾದ ಸಿದ್ದಪ್ಪ (೧೫), ಮಾಯಪ್ಪ (೧೩) ಎಂಬ ಮೂವರು ಪುಟ್ಟ ಮಕ್ಕಳೊಂದಿಗೆ ಕಾಶಪ್ಪ ತಮ್ಮ ಮನೆಯ ಪಡಸಾಲೆಯಲ್ಲಿ ಮಲಗಿದ್ದರು. ಶುಕ್ರವಾರ ನಸುಕಿನ ಜಾವ ೩ ಗಂಟೆ ಸುಮಾರಿಗೆ ಮನೆಯ ಮೇಲ್ಚಾವಣೆ ಮಣ್ಣು ಮಲಗಿದ್ದವರ ಮೈಮೇಲೆ ಬೀಳತೊಡಗಿದೆ.
ಇದರಿಂದ ಏಚ್ಚೆತ್ತುಕೊಂಡ ಕಾಶಪ್ಪ ಗುಡದನ್ನವರ ದಂಪತಿಗಳಿಬ್ಬರು ತಮ್ಮ ಮಕ್ಕಳನ್ನು ಎಚ್ಚರಗೊಳಿಸಿ ಪಡಸಾಲೆಯ ಕಟ್ಟೆಯನ್ನು ಇಳಿಯುವಷ್ಟರಲ್ಲಿ ಏಕಾಏಕಿ ಭೂಕುಸಿತ ಸಂಭವಿಸಿದೆ. ಇದರಿಂದ ಅಲ್ಲೇ ಪಕ್ಕದಲ್ಲಿಟ್ಟಿದ್ದ ಹತ್ತಿ ತುಂಬಿದ್ದ ಚೀಲಗಳು ಹಾಗೂ ಮಕ್ಕಳ ಶಾಲಾ ಬ್ಯಾಗ್ ಭೂಕುಸಿತದ ಗುಂಡಿಯಲ್ಲಿ ಸಿಲುಕಿ ಕ್ಷಣಾರ್ಧದಲ್ಲಿಯೇ ಮನೆಯ ಬೃಹತ್ ಗೋಡೆ ಕುಸಿದು ಬಿದ್ದಿದೆ. ಇದರಿಂದ ತೀವ್ರ ಭಯಗೊಂಡ ಕುಟುಂಬ ಸದಸ್ಯರೆಲ್ಲರೂ ಮನೆಯಿಂದ ಹೊರ ಬಂದಿದ್ದಾರೆ. ಈ ಗೋಡೆಯು ಹೊರಗಿನ ಭಾಗದಲ್ಲಿ ಬಿದ್ದ ಪರಿಣಾಮ ಕುಟುಂಬಸ್ಥರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದು ವೇಳೆ ಮನೆಯ ಒಳಗಡೆ ಭಾಗದಲ್ಲಿ ಗೋಡೆ ಬಿದ್ದಿದ್ದರೆ ಭಾರಿ ಅನಾಹುತವೇ ನಡೆದು ಹೋಗುತ್ತಿತ್ತು.
ರಾತ್ರಿಯಿಡೀ ಪಕ್ಕದ ಮನೆಯಲ್ಲಿ ಆಶ್ರಯ ಪಡೆದು ಬೆಳಗ್ಗೆ ೭ ಗಂಟೆ ಸುಮಾರಿಗೆ ಭೂಕುಸಿತದಲ್ಲಿ ಸಿಲುಕಿದ್ದ ಹತ್ತಿ ಚೀಲ, ಮಕ್ಕಳ ಶಾಲಾ ಬ್ಯಾಗ್‌ಗಳನ್ನು ಹೊರ ತೆಗೆದಿದ್ದಾರೆ. ಭೂಕುಸಿತದ ಪರಿಣಾಮ ಮನೆಯ ಎಲ್ಲ ಗೋಡೆಗಳು ಅಭದ್ರಗೊಂಡು ಅಲುಗಾಡುತ್ತಿವೆ. ಇದರಿಂದ ಯಾವುದೇ ಕ್ಷಣದಲ್ಲಾದರೂ ತಮ್ಮ ಮನೆ ಬೀಳಬಹುದು ಎಂಬ ಆತಂಕದಿAದ ಕಾಶಪ್ಪ ಅವರು ಮನೆ ತೊರೆಯುವ ನಿರ್ಧಾರ ಮಾಡಿರುವುದಾಗಿ ತಿಳಿಸಿದರು. ಸ್ಥಳಕ್ಕೆ ಪುರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

loading...