ಬಿಜೆಪಿಯನ್ನು ಎನ್‌ಸಿಪಿ ಬೆಂಬಲಿಸುವುದಿಲ್ಲ: ಅಜಿತ್ ಪವಾರ್ ಸ್ಪಷ್ಟನುಡಿ

0
7

ಮುಂಬೈ- ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ಅವರ ನಿರ್ಧಾರವನ್ನು ತಮ್ಮ ಪಕ್ಷ ಬೆಂಬಲಿಸಲು ಸಾಧ್ಯವಿಲ್ಲ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವರಿಷ್ಠ ಶರದ್ ಪವಾರ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯನ್ನು ಬೆಂಬಲಿಸುವ ಅಜಿತ್ ಪವಾರ್ ಅವರ ನಿರ್ಧಾರ ಅವರ ವೈಯಕ್ತಿಕ ನಿರ್ಧಾರ ಮತ್ತು ಅದು ಎನ್‌ಸಿಪಿ ನಿರ್ಧಾರವಲ್ಲ. ಅವರ ಈ ನಿರ್ಧಾರವನ್ನು ನಾವು ಬೆಂಬಲಿಸುವುದಿಲ್ಲ ಅಥವಾ ಅನುಮೋದಿಸುವುದಿಲ್ಲ ಎಂದು ಶರದ್ ಪವಾರ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ಜನತಾ ಪಕ್ಷದ ದೇವೇಂದ್ರ ಫಡ್ನವಿಸ್ ಅವರು 19 ನೇ ಮುಖ್ಯಮಂತ್ರಿಯಾಗಿ ಹಾಗೂ ಎನ್‌ಸಿಪಿ ಪಕ್ಷದ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಶನಿವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ಶರದ್ ಪವಾರ್ ಈ ಹೇಳಿಕೆ ನೀಡಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶದ ದಿನದಿಂದ ಇಂದಿನವರೆಗೆ ಯಾವುದೇ ಪಕ್ಷಕ್ಕೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರವು ರೈತ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ, ಆದ್ದರಿಂದ ನಾವು ಸ್ಥಿರ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದೇವೆ ಎಂದು ಅಜಿತ್ ಪವಾರ್ ಉಪಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಮತ್ತೊಂದೆಡೆ, ಫಡ್ನವೀಸ್ ಅವರು ಸರ್ಕಾರ ರಚನೆಗೆ ಬಹುಮತ ಹೊಂದಿದ್ದಾರೆ. ಇದರ ಆಧಾರದ ಮೇಲೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಪ್ರಮಾಣ ಬೋಧಿಸಿದ್ದಾರೆ ಎಂದು ಹೇಳಿದರು.

ಪ್ರಮಾಣವಚನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಸರ್ಕಾರ ಸಂಪೂರ್ಣ ಬಹುಮತ ಹೊಂದಿದ್ದು, ಸರ್ಕಾರ ಐದು ವರ್ಷಗಳ ಕಾಲ ಅಧಿಕಾರ ನಡೆಸಲಿದೆ ಎಂದು ತಿಳಿಸಿದ್ದರು.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನಂತರ, ಶಿವಸೇನೆ ಮತ್ತು ಬಿಜೆಪಿ ನಡುವೆ ಮುಖ್ಯಮಂತ್ರಿ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದಾದ ಬಳಿಕ ಯಾವ ಪಕ್ಷಕ್ಕೂ ಸರ್ಕಾರ ರಚನೆ ಸಾಧ್ಯವಾಗದಿದ್ದಾಗ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಈ ಮಧ್ಯೆ ಶಿವಸೇನೆ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ ನಡೆಸಿತ್ತು. ಶುಕ್ರವಾರ ರಾತ್ರಿ ಸರ್ಕಾರ ರಚನೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿ, ಇಂದು ಅದನ್ನು ಅಧಿಕೃತವಾಗಿ ಘೋಷಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ಎನ್‌ಸಿಪಿಯ ಅಜಿತ್ ಪವಾರ್ ಅವರೊಂದಿಗೆ ಸೇರಿ ಬಿಜೆಪಿ ಸರ್ಕಾರ ರಚಿಸಿ ಅಚ್ಚರಿ ಮೂಡಿಸಿದೆ. ಆದರೆ ಬಹುಮತ ಸಾಬೀತುಪಡಿಸಲು ಸರ್ಕಾರ ಯಾವ ಮಾರ್ಗ ಅನುಸರಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪಕ್ಷದ ಮೂಲಗಳ ಪ್ರಕಾರ, ಅಜಿತ್ ಪವಾರ್ ಅವರಿಗೆ 35 ಎನ್‌ಸಿಪಿ ಶಾಸಕರ ಬೆಂಬಲವಿದೆ. ಚುನಾವಣೆಯಲ್ಲಿ ಒಟ್ಟು ಎನ್‌ಸಿಪಿ 54 ಸ್ಥಾನಗಳನ್ನು ಪಡೆದಿದೆ.

ಎನ್‌ಸಿಪಿ ಹಿರಿಯ ನಾಯಕ ಪ್ರಫುಲ್ ಪಟೇಲ್ ಮಾತನಾಡಿ, ಇದು ಎನ್‌ಸಿಪಿಯ ನಿರ್ಧಾರವಲ್ಲ, ಶರದ್ ಪವಾರ್ ಅವರ ಬೆಂಬಲ ಕೂಡ ಇಲ್ಲ ಎಂದು ಹೇಳಿದರು.

ಆದಾಗ್ಯೂ, ಅಜಿತ್ ಪವಾರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಏಕೆಂದರೆ ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಎಂಬ ಮೂರು ಪಕ್ಷಗಳ ಮೈತ್ರಿ ಕುರಿತು ಮಾತುಕತೆ ಕೊನೆಗೊಂಡಿಲ್ಲ ಎಂದು ಅವರು ಕಾರಣ ನೀಡಿದ್ದಾರೆ.

ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸಲು ಮೈತ್ರಿ ನಿರ್ಧರಿಸಿದೆ ಎಂದು ಪವಾರ್ ಹೇಳಿದ ಮರುದಿನವೇ ಬಿಜೆಪಿ ಸರ್ಕಾರ ರಚನೆಯಾಗಿದೆ.

loading...