ಶಿಕ್ಷಣವೊಂದೇ ನಮ್ಮ ಭವಿಷ್ಯವನ್ನು ರೂಪಿಸಬಲ್ಲದು : ನರೇಶ ಜೈನ್

0
2

ಗದಗ: ನಾವಿಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಕ್ಷಣವೊಂದೇ ನಮ್ಮ ಭವ್ಯ ಭವಿಷ್ಯವನ್ನು ರೂಪಿಸಬಲ್ಲದು ಎಂದು ರೋಟರಿ ಕ್ಲಬ್‌ನ ಕಾರ್ಯದರ್ಶಿ ನರೇಶ ಜೈನ್ ಅಭಿಪ್ರಾಯಪಟ್ಟರು.
ಅವರು ನಗರದ ಅಬ್ರಾರ್ ಎಜ್ಯುಕೇಶನ್ ಆ್ಯಂಡ್ ಸೋಸಿಯಲ್ ವೇಲ್ಪೇರ್ ಟ್ರಸ್ಟನ ಅಲಿ ಅಬ್ರಾರ್ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗದುಗಿನ ವಿನೋದ ಸ್ಟೇಷನರಿಯ ವಿನೋದಕುಮಾರ ಪೋಲಾಮುಥಾ ಅವರು ಗದಗ ರೋಟರಿ ಕ್ಲಬ್ ಮೂಲಕ ನೀಡಿದ ಕಲಿಕಾ ಸಾಮಗ್ರಿಗಳಾದ ಉಚಿತ ನೋಟ ಪುಸ್ತಕಗಳನ್ನು ಹಾಗೂ ಪೆನ್ನುಗಳನ್ನು ವಿತರಿಸಿ ಮಾತನಾಡಿದರು.
ಶಿಕ್ಷಣ ಪ್ರಕ್ರಿಯೆಯು ಕೇವಲ ಶಿಕ್ಷಕ ಮತ್ತು ಮಕ್ಕಳನ್ನು ಮಾತ್ರ ಅವಲಂಭಿಸಿಲ್ಲ. ಅದಕ್ಕೆ ಪೂರಕವಾಗಿ ಪಾಲಕರು ಮತ್ತು ಸಮುದಾಯದ ಪಾತ್ರವು ಮುಖ್ಯವಾಗಿರುತ್ತದೆ ಈ ಮಾಲಿಕೆಯಲ್ಲಿ ಖಾಸಗಿ ಶಾಲೆಗಳಿಗೆ ಸಮುದಾಯವು ನೀಡುವ ಕೊಡುಗೆಗಳು ಹೆಚ್ಚು ಉಪಯುಕ್ತತೆ ಇದೆ, ಏಕೆಂದರೆ ಖಾಸಗಿ ಶಾಲೆಯ ಮಕ್ಕಳಿಗೆ ಸರಕಾರದ ಅನುದಾನವೂ ಇಲ್ಲ, ಸೌಲಭ್ಯವೂ ಇಲ್ಲ ಆದ್ದರಿಂದ ಇಂತಹ ಶಾಲೆಗಳಿಗೆ ಸಂಘ ಸಂಸ್ಥೆಗಳು ನೀಡುವ ಕೊಡುಗೆ, ಕಲಿಕಾ ಸಾಮಗ್ರಿಗಳು ಹೆಚ್ಚು ಫಲಪ್ರದ ಎಂದರು.
ರೋಟರಿ ಕ್ಲಬ್‌ನ ಹಿರಿಯ ಸದಸ್ಯ ಡಾ.ರಾಜೇಂದ್ರ ಗಚ್ಚಿನಮಠ ಅವರು ಮಾತನಾಡಿ ಉನ್ನತ ಮಟ್ಟದ ಅಧಿಕಾರಿಗಳು, ವೈದ್ಯರು, ಇಂಜನೀಯರ್ಸ, ಶಿಕ್ಷಕರು, ಉಪನ್ಯಾಸಕರು, ವಿಜ್ಞಾನಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಂದು ಉನ್ನತವಾದ ಹುದ್ದೆಯಲ್ಲಿದ್ದಾರೆ ಎಂದರೆ ಅವರು ಪಡೆದ ಶಿಕ್ಷಣದಿಂದ ಅದು ಸಾಧ್ಯವಾಗಿದೆ ಆದ್ದರಿಂದ ನಾವಿಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಶಿಕ್ಷಣವೊಂದೇ ನಮ್ಮ ಭವ್ಯ ಭವಿಷ್ಯವನ್ನು ರೂಪಿಸಬಲ್ಲದು ನೀವು ಚೆನ್ನಾಗಿ ಅಭ್ಯಾಸ ಮಾಡಿ ದೊಡ್ಡ ವ್ಯಕ್ತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಹಿತೋಪದೇಶ ನೀಡಿದರು.
ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಮಹಾಂತೇಶ ಬಾತಾಖಾನಿ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಅಧ್ಯಕ್ಷ ಶಿವಾಚಾರ್ಯ ಹೊಸಳ್ಳಿಮಠ ಮಾತನಾಡಿ ರೋಟರಿ ಕ್ಲಬ್ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ ಎಂದರು.
ಅಬ್ರಾರ್ ಎಜ್ಯುಕೇಶನ್ ಆ್ಯಂಡ್ ಸೋಸಿಯಲ್ ವೇಲ್ಪೇರ್ ಟ್ರಸ್ಟ ಅಧ್ಯಕ್ಷ ಜನಾಬ ಕೆ.ಎ.ಖಾಜಿ ಮಾತನಾಡಿ ಸಾಮಾಜಿಕ ಸಂಘಟನೆಯಾದ ರೋಟರಿ ಕ್ಲಬ್ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿದೆ. ನಮ್ಮ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಮಕ್ಕಳ ಕಲಿಕೆಗೆ ಪ್ರೋತ್ಸಾಹಿಸಿದೆ ಸಮುದಾಯದ ಹಾಗೂ ಸಾಮಾಜಿಕ ಸಂಘಟನೆಗಳು ಇಂತಹ ಕಾರ್ಯವನ್ನು ಕೈಗೊಂಡಿರುವದು ಶ್ಲಾö್ಯಘನೀಯ ಎಂದರು.
ಟ್ರಸ್ಟ ಕಾರ್ಯದರ್ಶಿ ಫಕ್ರುದ್ದೀನ್ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಧರ ಸುಲ್ತಾನಪೂರ, ಮೌಲಾನ ಝಕ್ರೀಯಾ ಖಾಜಿ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೋಂಡಿದ್ದರು. ಪ್ರಾರಂಭದಲ್ಲಿ ಮೌಲಾ ಶಬ್ಬೀರ್ ಅಹ್ಮದ್ ಕುರಾಣ ಪಠಿಸಿದರು, ಶಾಲಾ ಮುಖ್ಯೋಪಾಧ್ಯಾಯ ಮುಕ್ತುಂಸಾಬ ಆಡೀನ ಸ್ವಾಗತಿಸಿ ನಿರೂಪಿಸಿದರು ಕೊನೆಗೆ ರಾಜೇಖಾನ್ ಲೋದಿ ವಂದಿಸಿದರು.

loading...