ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಉತ್ಕೃಷ್ಟ ಸಾಧನೆ

0
15

ಕನ್ನಡಮ್ಮ ಸುದ್ದಿ, ಧಾರವಾಡ – ವಿದ್ಯಾರ್ಥಿಗಳು ತಮ್ಮ ವ್ಯಾಸಂಗದಲ್ಲಿ ನಿರ್ದಿಷ್ಟ ಬದ್ಧತೆಯೊಂದಿಗೆ ಬಲವಾದ ಆತ್ಮವಿಶ್ವಾಸವನ್ನು ಹೊಂದಿದಾಗ ಉನ್ನತ ಸಾಧನೆ ಸಾಧ್ಯವಾಗುತ್ತದೆ ಎಂದು ರಾಜ್ಯದ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಗರದ ಕರ್ನಾಟಕ ಎಜ್ಯುಕೇಶನ್ ಬೋರ್ಡ ಹಾಗೂ ಕರ್ನಾಟಕ ಹೈಸ್ಕೂಲ್ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಲಿತ ಶಾಲೆಯನ್ನು ಹಾಗೂ ಅಕ್ಷರ ನೀಡಿದ ಅಧ್ಯಾಪಕರುಗಳನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಶಿಕ್ಷಕರಲ್ಲಿ ಭಕ್ತಿ-ಗೌರವ ಹೊಂದಿ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದಾಗ ಉತ್ಕೃಷ್ಟ ಸಾಧನೆ ಮಾಡಿ ಮೇರು ವ್ಯಕ್ತಿತ್ವನ್ನು ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.
ಎಸ್.ಎಸ್.ಎಲ್.ಸಿ.ವರೆಗೆ ಮಾಳಮಡ್ಡಿಯ ಕೆ.ಇ. ಬೋರ್ಡ ಶಾಲೆಯಲ್ಲಿಯೇ ವ್ಯಾಸಂಗ ಮಾಡಿದ್ದು, ಶತಮಾನಕಂಡ ಕೆ.ಇ. ಬೋರ್ಡ ಸಂಸ್ಥೆಯು ಉತ್ತರೋತ್ತರವಾಗಿ ಇನ್ನೂ ಅಧಿಕ ಶಿಕ್ಷಣ ಸಂಸ್ಥೆಗಳ ಆರಂಭಕ್ಕೆ ಸಾಕ್ಷಿಯಾಗಲಿ ಎಂದರು. ಇಂದು ಕೆ.ಇ. ಬೋರ್ಡ ಸಂಸ್ಥೆ ತಮಗೆ ಸನ್ಮಾನದ ಸಂದರ್ಭದಲ್ಲಿ ನೀಡಿರುವ ಸ್ಮರಣಿಕೆಯನ್ನು ಮನೆಯಲ್ಲಿಟ್ಟುಕೊಂಡು ನಿತ್ಯವೂ ದರ್ಶನ ಮಾಡಿ ಆ ಮೂಲಕ ಕೆ.ಇ. ಬೋರ್ಡ ಸಂಸ್ಥೆಯನ್ನು ಸದಾ ಸ್ಮರಿಸುತ್ತೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವ್ಹಿ. ಸಂಕನೂರ ಮಾತನಾಡಿ, ವಿದ್ಯಾವಿಕಾಸದ ಹಂಬಲವುಳ್ಳ ಅನೇಕ ದಿಗ್ಗಜರು ಬಹಳ ಪರಿಶ್ರಮವಹಿಸಿ ಕಟ್ಟಿ ಬೆಳೆಸಿದ ಕೆ.ಇ. ಬೋರ್ಡ ಸಂಸ್ಥೆಯು ಶತಮಾನದ ಸುದೀರ್ಘ ಪಯಣದಲ್ಲಿ ಹಲವಾರು ಸಾಧಕರನ್ನು ಹುಟ್ಟುಹಾಕಿ ನಾಡಿನ ಸೇವೆಗೆ ಸಮರ್ಪಿಸಿದೆ ಎಂದರು.
ಪದ್ಮಭೂಷಣ ಡಾ. ಬಿ.ಎಂ. ಹೆಗಡೆ ಮಾತನಾಡಿ, ವಿದ್ಯಾದಾನ ಮಾಡುವ ಉನ್ನತ ಪ್ರಕ್ರಿಯೆ ಕೆ.ಇ. ಬೋರ್ಡ ಸಂಸ್ಥೆಯ ಶಾಲೆಗಳಲ್ಲಿ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಶಾಲೆಗಳು ಹೇಗೇ ಇರಲಿ, ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಕ್ರಿಯಾಶೀಲತೆಯ ಮೇಲೆ ವಿದ್ಯಾರ್ಥಿಗಳ ಜ್ಞಾನಾರ್ಜನೆ ಅಧಿಕಗೊಳ್ಳುತ್ತದೆ. ರಾಮಚಂದ್ರರಾವ್ ಪೋತೆ ಎನ್ನುವ ಅಧ್ಯಾಪಕರು ತಮಗೆ ಪ್ರೌಢ ಶಾಲೆಯಲ್ಲಿ ಹೇಳಿಕೊಟ್ಟ ಇಂಗ್ಲೀಷ್ ಭಾಷಾ ಜ್ಞಾನ ಶಾಶ್ವತವಾಗಿ ನನ್ನೊಳಗೆ ಇಂದಿಗೂ ಉಳಿದಿದೆ ಎಂದರು.
ಕೆ.ಇ. ಬೋರ್ಡ ಅಧ್ಯಕ್ಷ ಡಾ. ಅಶೋಕ ಚಚಡಿ ಅಧ್ಯಕ್ಷತೆವಹಿಸಿದ್ದರು. ಕೆ.ಇ. ಬೋರ್ಡ ಕಾರ್ಯಾಧ್ಯಕ್ಷ ಅರುಣ ನಾಡಗೀರ ಸ್ವಾಗತಿಸಿದರು. ಡಾ. ಶರಣಮ್ಮ ಗೋರೇಬಾಳ ಹಾಗೂ ಸಂಪ್ರೀತಾ ಮಳಗಿ ನಿರೂಪಿಸಿದರು. ಕೆ.ಇ. ಬೋರ್ಡ ಕಾರ್ಯದರ್ಶಿ ಕೆ.ಬಿ. ಕುಲಕರ್ಣಿ ವಂದಿಸಿದರು. ನೂರು ವಸಂತ ಕಂಡ ಸಂಭ್ರಮ’ ಎನ್ನುವ ಕೆ.ಇ. ಬೋರ್ಡ ಶತಮಾನೋತ್ಸವದ ಸ್ಮರಣ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕೆ.ಇ. ಬೋರ್ಡ ಅಂಗ ಸಂಸ್ಥೆಗಳ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು, ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರನ್ನು, ಕೆ.ಇ. ಬೋರ್ಡ ಪದಾಧಿಕಾರಿಗಳನ್ನು ಗೌರವಿಸಲಾಯಿತು.

loading...