ಉಪ ಚುನಾವಣೆ ಫಲಿತಾಂಶದ ಬಳಿಕ ಇನ್ನಷ್ಟು ಶಾಸಕರು ಬಿಜೆಪಿ ಸೇರ್ಪಡೆ: ಲಿಂಬಾವಳಿ

0
1

ಬೆಂಗಳೂರು:-ಉಪ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಇನ್ನಷ್ಟು ಶಾಸಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಸೇರ್ಪಡೆಯಾಗುವವರ ಪಟ್ಟಿಯಲ್ಲಿ ಫಲಿತಾಂಶದ ದಿನ ಬಿಡುಗಡೆ ಮಾಡಲಾಗುವುದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ.105 ಮತ್ತು ಓರ್ವ ಪಕ್ಷೇತರ ಶಾಸಕರ ಬೆಂಬಲ ಈಗಾಗಲೇ ಸರ್ಕಾರಕ್ಕಿದೆ. ಡಿಸೆಂಬರ್ 9 ರ ಬಳಿಕ ಏಕ‌ಪಕ್ಷದ ಸುಭದ್ರ ಸರ್ಕಾರ ರಚನೆಯಾಗಲಿದೆ. 15 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವಂತಹ ವಿಶ್ವಾಸ ಇದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆ ಬಳಿಕ ರಾಜ್ಯದಲ್ಲೂ ಜೆಡಿಎಸ್-ಕಾಂಗ್ರೆಸ್, ಮತ್ತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಜೆಪಿಗೆ ಕಡಿಮೆ ಸ್ಥಾನ ಬಂದರೆ ಮೈತ್ರಿ ‌ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಬಿಜೆಪಿ‌ ಸರ್ಕಾರ ಬೀಳಿಸಲು ಬಿಡಲ್ಲ ಎಂದು ಜೆಡಿಎಸ್ ವರಿಷ್ಠರು ಹೇಳಿಕೆ ನೀಡಿದ್ದಾರೆ. ಹೀಗೆ ಗೊಂದಲಕಾರಿ ಹೇಳಿಕೆ ನೀಡಿ ಜನರನ್ನು ದಾರಿ‌ತಪ್ಪಿಸುವ ಯತ್ನ ನಡೆಸಲಾಗುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ಜನರು‌ ಗೊಂದಲಕ್ಕೊಳಗಾಗಿಲ್ಲ. ಆದರೆ ಜೆಡಿಎಸ್ ಪಕ್ಷದ ನಾಯಕರೇ ಗೊಂದಲಕ್ಕೆ ಬಿದ್ದಿದ್ದಾರೆ. ಇದರಿಂದಾಗಿ‌ ಬಿಜೆಪಿಗೆ ಲಾಭವಾಗಲಿದೆ. ಅದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯಸಭೆ ಉಪ‌ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿತ್ತು. ಆದರೆ ಚುನಾವಣೆ ಕಣಕ್ಕೆ ಇಳಿಸದೆ ಸುಮ್ಮನಿರುವುದು ಅವರು ಉಪ‌ಚುನಾವಣೆಯಲ್ಲಿ ಬಹುಮತ ಪಡೆಯುವುದಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ವ್ಯಾಖ್ಯಾನಿಸಿದರು.

ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಒಂದು ತಂಡ ಸೋನಿಯಾ ಗಾಂಧಿ ಭೇಟಿಗೆ ತೆರಳಲಿದೆ. ಆ ಮೂಲಕ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಕಾಂಗ್ರೆಸ್ ಉನ್ನತ ಮಟ್ಟದ ಮೂಲ ತಿಳಿಸಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದರು.
ಡಿಸೆಂಬರ್ 1 ರಿಂದ ಮನೆ ಮನೆಗೆ ಭೇಟಿ ನೀಡಿ ಸಂಪರ್ಕ ಅಭಿಯಾನ, ಬೈಕ್ ಜಾಥಾ, ಪಾದಯಾತ್ರೆ, ಬೂತ್ ಮಟ್ಟದ ಮತ್ತು ಬೂತ್ ಅಧ್ಯಕ್ಷರ ಸಭೆಗಳನ್ನು ನಡೆಸಿದ್ದೇವೆ. ಅಭಿವೃದ್ಧಿ ದೃಷ್ಟಿಯಿಂದ 8000 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ್ದೇವೆ ಎಂದು ಲಿಂಬಾವಳಿ ಹೇಳಿದರು.

ಉಪ‌ಚುನಾವಣೆ ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಯಾರೆಲ್ಲಾ ಪಕ್ಷಕ್ಕೆ ಬರ್ತಾರೆ ಎಂಬುದನ್ನು ಉಪ ಚುನಾವಣೆ ಫಲಿತಾಂಶದ ಸಂಭ್ರಮಾಚರಣೆ ದಿನ ಅಧಿಕೃತವಾಗಿ ಘೋಷಿಸುತ್ತೇವೆ. ಕುಮಾರಸ್ವಾಮಿ‌ ಹೇಳಿಕೆ ಒಂದೊಂದು ಕಡೆ ಒಂದೊಂದು ರೀತಿಯಲ್ಲಿರುತ್ತದೆ ಎಂದು ವ್ಯಂಗ್ಯವಾಡಿದರು.

loading...