ಬೈಕ್ ಅಪಘಾತ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

0
8

ನರಗುಂದ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಬೈಕ್ ಚಾಲಕ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟಣೆ ತಾಲೂಕಿನ ಶಿರೋಳ ಗ್ರಾಮದ ಹಾದಿ ಬಸವೇಶ್ವರ ದೇವಸ್ಥಾನದ ಬಳಿ ಮಂಗಳವಾರ ಸಾಯಂಕಾಲ ೪ ಗಂಟೆ ಸುಮಾರಿಗೆ ನಡೆದಿದೆ.
ಮುಂಡರಗಿ ತಾಲೂಕಿನ ಡೋಣೆ ಗ್ರಾಮದ ಯಲ್ಲಪ್ಪ ಪೂಜಾರ (೨೧) ಸಾವನ್ನಪ್ಪಿದ ಬೈಕ್ ಚಾಲಕ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಹಿಂಬದಿ ಬೈಕ್ ಸವಾರ ವೆಂಕಟೇಶ ಕುರಹಟ್ಟಿ (೨೩) ಹಾಗೂ ನರಗುಂದ ತಾಲೂಕಿನ ಖಾನಾಪೂರ ಗ್ರಾಮದ ಮತ್ತೊಂದು ಬೈಕ್ ಸವಾರರಾದ ಮಾಬುಸಾಬ ನಧಾಪ (೪೫) ಹನಮಂತಪ್ಪ ತಡಸಿ (೫೦) ಎಂಬುವರ ತಲೆ, ಕೈ,ಕಾಲು ಮತ್ತು ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಈ ಮೂವರಿಗೂ ನರಗುಂದ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬೈಕ್ ಚಾಲಕ ಮಂಗಳವಾರ ಡೋಣೆ ಗ್ರಾಮದಿಂದ ನರಗುಂದ ತಾಲೂಕಿನ ರಡ್ಡೇರ ನಾಗನೂರ, ಶಿರೋಳ ಒಳರಸ್ತೆ ಮಾರ್ಗವಾಗಿ ಕೊಣ್ಣೂರಿಗೆ ತೆರಳುತ್ತಿದ್ದ. ನರಗುಂದ ತಾಲೂಕಿನ ಖಾನಾಪೂರ ಗ್ರಾಮದ ಮತ್ತೊಂದು ಬೈಕ್ ಸವಾರರಾದ ಮಾಬುಸಾಬ ನಧಾಪ, ಹನಮಂತಪ್ಪ ತಡಸಿ ಶಿರೋಳದಿಂದ ಖಾನಾಪೂರ ಗ್ರಾಮಕ್ಕೆ ಆಗಮಿಸುವ ಮಾರ್ಗಮಧ್ಯೆ ಈ ಡಿಕ್ಕಿ ಸಂಭವಿಸಿದೆ. ಈ ಕುರಿತು ನರಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...