ಕೋಳಿವಾಡ ಮನೆ ಮೇಲೆ ಐಟಿ ದಾಳಿಗೂ ತಮಗೂ ಸಂಬಂಧವಿಲ್ಲ: ಬಸವರಾಜ ಬೊಮ್ಮಾಯಿ

0
19

ದಾವಣಗೆರೆ: ರಾಣೆಬೆನ್ನೂರು ಉಪ ಚುನಾವಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಮೇಲಿನ ದಾಳಿಗೂ, ಬಿಜೆಪಿಗೂ ಸಂಬಂಧವಿಲ್ಲ. ಈ ಬಗ್ಗೆ ಸುಮ್ಮನೇ ತಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ನಿನ್ನೆ ಸಂಜೆಯೇ ರಾಣೆಬೆನ್ನೂರಿನಿಂದ ಬಂದಿದ್ದೇನೆ. ದಾಳಿಯಿಂದ ಅವರಿಗೆ ನೋವಾಗಿರಬಹುದು, ಅದಕ್ಕಾಗಿ ಕೋಳಿವಾಡ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ನಮ್ಮ ಬೆಂಬಲಿಗರ ಮನೆಗಳನ್ನೂ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ನಮ್ಮ ಕಾರುಗಳನ್ನು ಕೂಡ ಪೊಲೀಸರು ತಪಾಸಣೆ ಮಾಡಿದ್ದಾರೆ, ನನ್ನ ಮೇಲಿನ ಆರೋಪ ಶುದ್ಧ ಸುಳ್ಳು ಎಂದು ಹೇಳಿದರು.
ನನ್ನ ಮೇಲೆ ಕೋಳಿವಾಡ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು. ಚುನಾವಣೆ ಅಧಿಕಾರಿಗಳು ತಮಗೆ ದೊರೆತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ್ದಾರೆ. ನಾನು ಅಂತಹ ರಾಜಕಾರಣ ಮಾಡುವವನಲ್ಲ ಎಂದು ಸ್ಪಷ್ಟಪಡಿಸಿದರು.

ಹನಿ ಟ್ರ್ಯಾಪ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಯುತ್ತಿದೆ, ವಿಡಿಯೋ ನಾಶಪಡಿಸುವಂತೆ ತಮ್ಮ ಮೇಲೆ ಯಾವುದೇ ಒತ್ತಡಗಳಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಬಿಜೆಪಿ ಸರ್ಕಾರ ಬೀಳುವುದಕ್ಕಿಂತ ಹೆಚ್ಚು ಸಿದ್ದರಾಮಯ್ಯ ಕೆಳಗಿಳಿಯಬೇಕು ಎಂಬ ಆಸೆ ಇದ್ದಂತಿದೆ. ಸಿದ್ದರಾಮಯ್ಯ ಅವರನ್ನು ವಿಪಕ್ಷ ಸ್ಥಾನದಿಂದ ಕೆಳಗಿಳಿಸುವುದೇ ಖರ್ಗೆ ಗುರಿಯಾಗಿದೆ. ಆದ್ದರಿಂದ ಡಿಸೆಂಬರ್ 9ರ ನಂತರ ಸಿಹಿ ಹಂಚುತ್ತೇನೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬೀಳುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಎಲ್ಲಾ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಶಿವಾಜಿನಗರ ಒಂದು ಕಷ್ಟ ಇತ್ತು, ಈಗ ಅದನ್ನು ಕೂಡ ಗೆಲ್ಲುತ್ತೇವೆ.‌‌‌ ಚುನಾವಣೆ ನಂತರ ಪೊಲೀಸರ ವೇತನದ ಬಗ್ಗೆ ಪರಿಶೀಲನೆ ಮಾಡುತ್ತೇವೆ‌‌‌, ಪೊಲೀಸ್ ಸಿಬ್ಬಂದಿಗೆ ಯಾವ ರೀತಿ ಸಹಕಾರ ನೀಡಬೇಕೋ ಅದನ್ನು ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೋಳಿವಾಡ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆಯಾಗಿದ್ದು, ಇದರಲ್ಲಿ ಹಸ್ತಕ್ಷೇಪ ನಡೆಸಲು ಗೃಹ ಸಚಿವರಿಗೆ ಯಾವುದೇ ಅಧಿಕಾರ ಇಲ್ಲ. ಆಗಿದ್ದರೂ ಕೋಳಿವಾಡ ಅವರು ಸೋಲಿನ ಹತಾಶೆಯಿಂದ ವೃಥಾ ಆರೋಪ ಮಾಡುತ್ತಿದ್ದಾರೆ. ಈಗಾಗಲೇ ಕೋಳಿವಾಡ ಸೋಲುವ ಭಯ ಕಾಡುತ್ತಿದೆ ಎಂದರು.

ಸಿದ್ದರಾಮಯ್ಯ ರಾಣೆಬೆನ್ನೂರು ಕ್ಷೇತ್ರಕ್ಕೆ ಬಂದಾಗ ಮತದಾರರಿಗೆ 500-1000 ರೂಪಾಯಿ ಹಣ ಹಂಚಿದ್ದರು. ನಾವು ದಾಳಿ ಮಾಡಿಸುವುದಿದ್ದರೆ ಆಗಲೇ ಮಾಡಿಸಬಹುದಿತ್ತು. ಕೋಳಿವಾಡ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಐಟಿ ದಾಳಿ ನಡೆದಾಗಲೆಲ್ಲಾ ಬಿಜೆಪಿ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ರೇಣುಕಾಚಾರ್ಯ ಹೇಳಿದರು.

loading...