ಡಿ.೧೧ರಿಂದ ೩೧ರವರೆಗೆ ವಿಶೇಷ ಶಾಲಾ ಲಸಿಕಾ ಅಭಿಯಾನ : ಯಶಸ್ವಿಗೊಸಿಲು ಕರೆ

0
23

ವಿಜಯಪುರ: ಇದೇ ಡಿಸೆಂಬರ್ ೧೧ ರಿಂದ ೩೧ರವರೆಗೆ ಟಿಡಿ-ಡಿಪಿಟಿಯ ವಿಶೇಷ ಶಾಲಾ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳುವಂತೆ ನಗರದ ಎಲ್ಲ ಬಿ.ಆರ್.ಸಿ. ಸಿ.ಆರ್.ಸಿ. ಹಾಗೂ ಶಾಲಾ ಶಿಕ್ಷಕರಿಗೆ ಎಸ್.ಎಂ.ಓ. ಡಾ.ಮುಕುಂದ ಗಲಗಲಿ ಅವರು ಕರೆ ನೀಡಿದರು.
ನಗರದ ಟಕ್ಕೆಯಲ್ಲಿರುವ ಬಿ.ಡಿ.ಜತ್ತಿ ಹಿಂದಿ ಬಿಎಡ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಗರದ ಎಲ್ಲ ಬಿಆರ್‌ಸಿ-ಸಿಆರ್‌ಸಿಗಳಿಗೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರಿಗೆ ಹಮ್ಮಿಕೊಂಡ ವಿಶೇಷ ಶಾಲಾ ಲಸಿಕಾ ಅಭಿಯಾನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇದೇ ಡಿಸೆಂಬರ್ ೧೧ ರಿಂದ ೩೧ರವರೆಗೆ ಕೈಗೊಂಡ ವಿಶೇಷ ಶಾಲಾ ಲಸಿಕಾ ಅಭಿಯಾನದಲ್ಲಿ ಎಲ್ಲ ಬಿಆರ್‌ಸಿ,ಸಿಆರ್‌ಸಿ ಹಾಗೂ ಶಿಕ್ಷಕರು ಸಕ್ರೀಯವಾಗಿ ಭಾಗವಹಿಸಿ ಯಶಸ್ವಿಯಾಗಿ ಅಭಿಯಾನವನ್ನು ಕೈಗೊಳ್ಳಬೇಕು. ೧ನೇ ತರಗತಿ ಮಕ್ಕಳಿಗೆ ಡಿಪಿಟಿ ಲಸಿಕೆ ಹಾಗೂ ೨ ರಿಂದ ೧೦ನೇ ತರಗತಿ ಮಕ್ಕಳಿಗೆ ಟಿಡಿ ಲಸಿಕೆ ತಪ್ಪದೇ ಹಾಕಿಸಬೇಕು. ಮಕ್ಕಳಿಗೆ ಮಾರಣಾಂತಿಕವಾದ ಡಿಪ್ತೀರಿಯಾ (ಗಂಟಲುಮಾರಿ) ರೋಗವನ್ನು ತಡೆಗಟ್ಟಲು ತಪ್ಪದೇ ಲಸಿಕೆ ಹಾಕಿಸಬೇಕು. ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಪ್ರತಿ ಶಾಲೆಯಲ್ಲಿ ಪಾಲಕರ ಸಭೆ ನಡೆಸಿ ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಿ, ಮಕ್ಕಳಿಗೆ ಲಸಿಕೆ ಹಾಕಿಸಲು ಪಾಲಕರಲ್ಲಿ ತಿಳುವಳಿಕೆ ಮೂಡಿಸಬೇಕು. ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿ ಮಗುವಿನ ಜನ್ಮಸಿದ್ಧ ಹಕ್ಕು ಹಾಗೂ ಲಸಿಕೆಗಳನ್ನು ಕೊಡಿಸುವುದು ಪೋಷಕರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಕವಿತಾ ಅವರು ಮಾತನಾಡಿ, ಡಿಪ್ತೀರಿಯಾ(ಗಂಟಲುಮಾರಿ) ರೋಗಮುಕ್ತ ತಾಲೂಕನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಬೇಕು. ವಿಶೇಷವಾಗಿ ಪಾಲಕರು ತಮ್ಮ ಮಗು ಓದುತ್ತಿರುವ ಶಾಲೆಗಳಿಗೆ ಭೇಟಿ ನೀಡಿ ಲಸಿಕಾ ದಿನಾಂಕವನ್ನು ಖಚಿತಪಡಿಸಿಕೊಂದು ಲಸಿಕಾ ದಿನದಂದು ಖುದ್ದಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸುವುದರ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದರು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ವೈದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಢಿ ಕಾರ್ಯಕರ್ತೆಯರ ಅಥವಾ ೧೦೪ ಆರೋಗ್ಯ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.
ಬಿ.ಡಿ. ಜತ್ತಿ ಹಿಂದಿ ಬಿಎಡ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹತ್ತಹಳ್ಳಿ ಅಧ್ಯಕ್ಷತೆ ವಹಿಸಿದ್ರು. ಎಸ್.ಎಸ್.ಚಟ್ಟೇರ ಸೇರಿದಂತೆ ಎಲ್ಲ ಬಿಆರ್‌ಸಿ-ಸಿಆರ್‌ಸಿ, ಶಿಕ್ಷಕರು ಉಪಸ್ಥಿತರಿದ್ದರು. ಮಂಜುನಾಥ ಗಲಗಲಿ ವಂದಿಸಿದರು.

loading...