ಸಾಮಾಜಿಕ ಬದಲಾವಣೆ ಅಗತ್ಯ: ಕೌಜಲಗಿ

0
21

ಕನ್ನಡಮ್ಮ ಸುದ್ದಿ, ಧಾರವಾಡ – `ಶರಣರು ಕಾಯಕಕ್ಕೆ ಬೆಲೆ ನೀಡಿದ್ದರು. ಕಾಯಕವೇ ಕೈಲಾಸವೆಂದು ನುಡಿದ ಅವರು ಕಾಯಕ ಯೋಗಿಗಳಾಗಲು ಜನರನ್ನು ಪ್ರೇರೆಪಿಸಿದರು ಇಂದಿನ ಜನರಿಗೆ ಹೊಣೆಗಾರಿಕೆ ಬೇಕಾಗಿಲ್ಲ. ಆದರೆ ತಮಗೆ ದೊರೆಯಬೇಕಾದ ಹಕ್ಕುಗಳ ಬಗ್ಗೆ ಮಾತ್ರ ಹೋರಾಟ ನಡೆಸುತ್ತಿರುವುದು ವಿಷಾದನೀಯ ಎಂದು ಧಾರವಾಡ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಪ್ರೊ. ಕೆ. ಎಸ್. ಕೌಜಲಗಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಗುರಪ್ಪ ಬೆಲ್ಲದ ದತ್ತಿ ಅಂಗವಾಗಿ ಸಂಘದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಕಾಯಕ ಪ್ರಜ್ಞೆ’ ವಿಷಯ ಉಪನ್ಯಾಸ ನೀಡಿ ಮಾತನಾಡಿದರು. ಕಾಯಕದಲ್ಲಿ ವೈವಿಧ್ಯತೆ ಇದ್ದು, ಮೂರುಸಾವಿರ ಕಾಯಕಗಳಿವೆ ಎಂದು ತಿಳಿದು ಬರುತ್ತದೆ. ಹಿಂದೆ ಉಳಿಗಮಾನ್ಯ ಪದ್ಧತಿ ಜಾರಿಯಲ್ಲಿ ಇದ್ದುದ್ದರಿಂದ ಸಮಾಜದಲ್ಲಿ ಶೋಷಣೆ ಇತ್ತು. ಶೋಷಣೆ ಏಕೆ ? ಎಂದು ಬಹುವಾಗಿ ಚಿಂತಿಸಿದ ಬಸವಣ್ಣನವರು ಶೋಷಣೆ ನಿಲ್ಲಲು ಎಲ್ಲರೂ ಕಾಯಕ ಯೋಗಿಗಳಾಗಬೇಕೆಂದರು. ನಮ್ಮಲ್ಲಿ ತುಂಬಿರುವ ಅಜ್ಞಾನ, ಆರ್ಥಿಕ ಮುಗ್ಗಟ್ಟು ನಿರ್ಮೂಲನೆ ಆದಾಗ ಸಮಾಜದಲ್ಲಿ ಸಮಾನತೆ ಬರುತ್ತದೆ ಎಂದರು.
ಉದ್ಯೋಗದಲ್ಲಿ ಮೇಲು-ಕೀಳು ಎಂಬ ಭೇದಗಳನ್ನು ಮಾಡದೇ, ಎಲ್ಲ ಕಾಯಕಗಳು ಗೌರವಯುತವಾದವು, ಆದ್ದರಿಂದ ಎಲ್ಲರೂ ಕಾಯಕ ಮಾಡಬೇಕು ಎಂದು ಹೇಳಿದ ಬಸವಣ್ಣನವರು ಶಿಕ್ಷಣಕ್ಕೆ ಒತ್ತು ನೀಡಿದರು. ನಾವು ನಮ್ಮ ಅಂತಃಶಕ್ತಿ ಹಾಗೂ ಆತ್ಮವಿಶ್ವಾಸಗಳನ್ನು ತೋರಿಸಬೇಕು. ಸಾಮಾಜಿಕ ಬದಲಾವಣೆಯು ಅತೀ ಮುಖ್ಯ ಎಂದ ಡಾ. ಕೌಜಲಗಿ ಅವರು ಶೃದ್ಧೆ, ಗುರಿ, ಸ್ವಚ್ಚ ಮನಸ್ಸುಗಳಿಂದ ಕಾಯಕ ಮಾಡಿದರೆ ಶ್ರೇಯಸ್ಸು ದೊರೆಯುತ್ತದೆ. ನಮ್ಮಲ್ಲಿ ಅವಶ್ಯವಾಗಿ ಸಮಯ ಪ್ರಜ್ಞೆ ಹಾಗೂ ಆತ್ಮವಿಶ್ವಾಸ ಇರಬೇಕು. ಬಸವಣ್ಣನವರು ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಲ್ಲಿ ಕಾಯಕ ಪ್ರವೃತ್ತಿ ಹಾಗೂ ದಾಸೋಹ ಕಲ್ಪನೆಯನ್ನು ನೀಡಿದ್ದರು ಎಂದರು
ಗ್ರAಥಾಲಯ ವಿದ್ವಾಂಸ ಡಾ. ಎಸ್. ಆರ್. ಗುಂಜಾಳ ಅಧ್ಯಕ್ಷತೆವಹಿಸಿ ಮಾತನಾಡಿ, `ಕಾಯಕವೇ ಕೈಲಾಸ’ ಎಂಬ ಬಸವಣ್ಣನವರ ವಾಣಿಯಂತೆ ಎಲ್ಲರೂ ನುಡಿದು-ನಡೆದು ತೋರಿಸಿದಾಗ ಸಮಾಜ ಖಂಡಿತವಾಗಿಯೂ ಪ್ರಗತಿ ಸಾಧಿಸಬಹುದು ಎಂದರು.
ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ ಮಾತನಾಡಿ, ದಿ. ಗುರಪ್ಪ ಬೆಲ್ಲದವರ ಸತ್ಯಶುದ್ಧ ಕಾಯಕ, ಸಮಯ ಪ್ರಜ್ಞೆ, ವೃತ್ತಿ ನೈಪುಣ್ಯತೆ, ಪ್ರ‍್ರಾಮಾಣಿಕ ಸೇವೆಯೇ ಅವರು ವ್ಯಾಪಾರೋದ್ಯಮದಲ್ಲಿ ಪ್ರಗತಿ ಕಾಣಲು ಸಾಧ್ಯವಾಯಿತು ಎಂದರು. ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಶಿವಳ್ಳಿ ವಂದಿಸಿದರು. ಮಹಾಂತೇಶ ನರೇಗಲ್ಲ ನಿರೂಪಿಸಿದರು.

loading...