ಸಿದ್ದರಾಮಯ್ಯ ಮೇಲೆ ಹೆಚ್ಚಿದ ಬಿಜೆಪಿಗರ ಒಲವು

0
31

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಸಿದ್ದರಾಮಯ್ಯ ಮೇಲೆ ಬಿಜೆಪಿಗರಿಗೆ ಇತ್ತೀಚೆಗೆ ಒಲವು‌ ಹೆಚ್ಚಿದಂತೆ ಕಾಣುತ್ತಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜಕಾರಣದಿಂದ ತಟಸ್ಥರಾಗಿದ್ದಂತೆ‌ ಸಿದ್ದರಾಮಯ್ಯ ಕಂಡುಬಂದರೂ ಅವರ ಬಿಜೆಪಿ‌ ನಾಯಕರ ಭೇಟಿ ಮತ್ತಿನ್ನೇನೋ‌ ಹೇಳುವಂತಿದೆ.
ಸಿದ್ದರಾಮಯ್ಯ ಅವರು ಆಸ್ಪತ್ರೆಯಲ್ಲಿದ್ದಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,‌ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿಯಾಗಿ ರಾಜಕಾರಣವೇ ಬೇರೆ ವೈಯಕ್ತಿಕ ಸಂಬಂಧಗಳೇ ಬೇರೆ ಎಂಬ ಸಂದೇಶ ಸಾರಿದ್ದರು.
ಕಾವೇರಿ ನಿವಾಸದಲ್ಲಿ‌‌ ವಿಶ್ರಾಂತಿ‌ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಆ ಬಳಿಕ ಬಿಜೆಪಿ‌ ನಾಯಕರ‌ ದಂಡೇ ಸಾಲುಸಾಲಾಗಿ ಬಂದು ಅವರ ಕುಶಲೋಪಚರಿ ವಿಚಾರಿಸುತ್ತಿದೆ. ಅದರಂತೆ‌ ಬಿಜೆಪಿ‌ ನಾಯಕ‌ ಅರವಿಂದ ಲಿಂಬಾವಳಿ ಸಹ ಮಂಗಳವಾರ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಅದರೊಂದಿಗೆ ಬಾಗಲಕೋಟೆ‌ ಬಿಜೆಪಿ ಸಂಸದ ಪಿ.ಸಿ.ಗದ್ದಿಗೌಡ, ಮಸ್ಕಿ ಬಿಜೆಪಿ‌‌ ಶಾಸಕ‌ ಪ್ರತಾಪ್‌ಗೌಡ ಪಾಟೀಲ್,‌ ನಿಡುಮಾಮಿಡಿ‌ ಶ್ರೀಗಳು ಸೇರಿದಂತೆ‌ ಹಲವರು ಭೇಟಿಯಾದರು.
ಕೆಲವು ದಿನಗಳ ಹಿಂದೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಮೇಶ್ ಜಾರಕಿಹೊಳಿ‌ ಮತ್ತು ತಂಡದ ಶಾಸಕರು ಸಿದ್ದರಾಮಯ್ಯ ಅವರೇ ಈಗಲೂ ತಮ್ಮ‌ ನಾಯಕರು ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದು ಹಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.

loading...