ಅಭಿಮನ್ಯು ಮಿಥುನ್‌ ಮಾರಕ ದಾಳಿ: ಉತ್ತರ ಪ್ರದೇಶ 280ಕ್ಕೆ ಆಲೌಟ್‌

0
13

ಹುಬ್ಬಳ್ಳಿ:- ಅಭಿಮನ್ಯು ಮಿಥುನ್ (60 ಕ್ಕೆ 6) ಅವರ ಮಾರಕ ದಾಳಿಗೆ ನಲುಗಿದ ಉತ್ತರ ಪ್ರದೇಶ 2019/20ರ ಆವೃತ್ತಿಯ ರಣಜಿ ಟ್ರೋಫಿ ಎಲೈಟ್‌ ಎ ಮತ್ತು ಬಿ ಗುಂಪಿನ ಎರಡನೇ ಸುತ್ತಿನ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಕರ್ನಾಟಕ ವಿರುದ್ಧ ಎರಡನೇ ದಿನ ಬಹುಬೇಗ ಆಲೌಟ್‌ ಆಯಿತು.
ಇಲ್ಲಿನ ಕೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐದು ವಿಕೆಟ್ ಕಳೆದುಕೊಂಡು232 ರನ್ ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಪ್ರವಾಸಿಗರು, ಇಂದು 111.2 ಓವರ್‌ಗಳಿಗೆ 281 ರನ್ ಗಳಿಗೆ ಆಲೌಟ್‌ ಆಯಿತು.
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 6 ಓವರ್‌ ಗಳಿಗೆ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಕ್ರೀಸ್‌ನಲ್ಲಿ ಡಿ.ನಿಶ್ಚಲ್‌ (6) ಹಾಗೂ ದೇವದತ್ತ ಪಡಿಕ್ಕಲ್‌(13) ಇದ್ದಾರೆ.
ಇಂದು ಬೆಳಗ್ಗೆ ಕ್ರೀಸ್ ಗೆ ಆಗಮಿಸಿದ ಮೊಹಮ್ಮದ್‌ ಸೈಫ್ ಮೊದಲನೇ ದಿನ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಇಂದೂ ಕೂಡ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಅವರು 181 ಎಸೆತಗಳಿಗೆ 11 ಬೌಂಡರಿಯೊಂದಿಗೆ 80 ರನ್ ಗಳಿಸಿದರು.  ಆದರೆ, ಇವರನ್ನು ಅಭಿಮನ್ಯು ಕ್ಲೀನ್ ಬೌಲ್ಡ್ ಮಾಡಿದರು. ಕೆಲ ಕಾಲ ಉತ್ತಮ ಬ್ಯಾಟಿಂಗ್ ಮಾಡಿದ್ದ ಸೌರಭ್‌ ಕುಮಾರ್‌ 37 ಎಸೆತಗಳಲ್ಲಿ 27 ರನ್‌ ಗಳಿಸಿ ರೋನಿತ್‌ ಮೋರೆಗೆ ವಿಕೆಟ್ ಒಪ್ಪಿಸಿದರು.
ಮಂಗಳವಾರ ಅತ್ಯುತ್ತಮ ಬೌಲಿಂಗ್ ಮಾಡಿ ಮೂರು ವಿಕೆಡ್ ಕಿತ್ತಿದ್ದ ಮಿಥುನ್‌ ಇಂದು ಕೂಡ ಅದೇ ಲಯ ಮುಂದುವರಿಸಿದರು. ಸೈಫ್‌, ಮೋಹಿತ್ ಜಂಗ್ರಾ ಮತ್ತು ಉಪೇಂದ್ರ ಯಾದವ್‌ ಅವರ ವಿಕೆಟ್‌ಗಳನ್ನು ಕಬಳಿಸಿದರು. ಇವರಿಗೆ ಸಾಥ್ ನೀಡಿದ ರೋನಿತ್‌ ಮೋರೆ ಮತ್ತು ಶ್ರೇಯಸ್‌ ಗೋಪಾಲ್ ತಲಾ ಎರಡು ವಿಕೆಟ್‌ ಪಡೆದರು.
ಸಂಕ್ಷಿಪ್ತ ಸ್ಕೋರ್‌
ಉತ್ತರ ಪ್ರದೇಶ
ಪ್ರಥಮ ಇನಿಂಗ್ಸ್: 111,2 ಓವರ್‌ಗಳಿಗೆ 281/10 (ಆರ್ಯನ್‌ ಜುಯಲ್‌ 109, ಮೊಹಮ್ಮದ್‌ ಸೈಫ್ 80, ಸೌರಭ್‌ ಕುಮಾರ್ 27; ಅಭಿಮನ್ಯು ಮಿಥುನ್ 60 ಕ್ಕೆ 6, ರೋನಿತ್ ಮೋರೆ 41 ಕ್ಕೆ 2, ಶ್ರೇಯಸ್‌ ಗೋಪಾಲ್ 51 ಕ್ಕೆ 2)
ಕರ್ನಾಟಕ
ಪ್ರಥಮ ಇನಿಂಗ್ಸ್: 6 ಓವರ್‌ಗಳಿಗೆ 19/0 (ದೇವದತ್ತ ಪಡಿಕ್ಕಲ್ ಔಟಾಗದೆ 13, ಡಿ.ನಿಶ್ಚಲ್ ಔಟಾಗದೆ 6)

loading...