ಅಮಿತ್ ಷಾ ಸಮಾವೇಶಕ್ಕೆ ಬಿಜೆಪಿ ಭರ್ಜರಿ ತಯಾರಿ

0
13

ಹುಬ್ಬಳ್ಳಿ- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಗೃಹ ಸಚಿವ  ಅಮಿತ್ ಷಾ ಪಾಲ್ಗೊಳ್ಳುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜನಜಾಗೃತಿ ಸಮಾವೇಶಕ್ಕೆ  ಸಿದ್ಧತೆ ಭರದಿಂದ ಸಾಗಿದೆ.
ಇದೇ  18 ರಂದು ಇಲ್ಲಿನ  ನೆಹರೂ  ಮೈದಾನದಲ್ಲಿ ನಡೆಯಲಿರುವ   ದಕ್ಷಿಣ ಭಾರತದ ಮೊದಲ ಸಮಾವೇಶ ಇದಾಗಿದ್ದು,  ಇದರ ಯಶಸ್ವಿಗೆ  ಬಿಜೆಪಿ ಪಡೆ ಟೊಂಕ ಕಟ್ಟಿ ಹಗಲು- ಇರುಳು ಶ್ರಮಿಸುತ್ತಿದೆ.
ನೆಹರು ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಧಾರವಾಡ ಹಾಗೂ ಸುತ್ತಲಿನ ಜಿಲ್ಲೆಗಳ ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎನ್ನಲಾಗಿದೆ . ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್  ಕಟೀಲ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಕುಂದಗೋಳ, ಕಲಘಟಗಿ, ಧಾರವಾಡ, ನವಲಗುಂದ ಮುಖಾಂತರ ಬರುವವರಿಗಾಗಿ ನಗರದ ಹೊರ ವಲಯದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ಜವಾಬ್ದಾರಿ ನಿರ್ವಹಿಸುವುದಕ್ಕಾಗಿ ಈಗಾಗಲೇ 25 ಸಮಿತಿ ರಚಿಸಿ, ಕಾರ್ಯಕರ್ತರಿಗೆ ಜವಾಬ್ದಾರಿ ವಹಿಸಲಾಗಿದೆ. ವಿವಿಧ ಮಠಾಧೀಶರಿಗೂ  ಆಮಂತ್ರಣ ನೀಡಲಾಗಿದೆ.
ಉತ್ತರ ಕರ್ನಾಟಕದಲ್ಲಿ  ನೆರೆ ಹಾವಳಿ ಬಂದಾಗ ಆಗಮಿಸದೆ, ಜನರ ಕಷ್ಟ- ಸುಖ ಕೇಳದ  ಅಮಿತ್ ಷಾ, ಈ ಭಾಗಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಮಹದಾಯಿ ವಿವಾದ, ಸಮಸ್ಯೆ   ಬಗೆಹರಿಸಿಲ್ಲ ಎಂದು ಆರೋಪಿಸಿ ‘ಗೋ ಬ್ಯಾಕ್ ಅಮಿತ್ ಷಾ’ ಘೊಷಣೆಯೊಂದಿಗೆ ಪ್ರತಿಭಟನೆ ನಡೆಸಲು  ಜಿಲ್ಲಾ ಕಾಂಗ್ರೆಸ್ ತೀರ್ಮಾನಿಸಿದೆ.

loading...