ಪೌರತ್ವ ತಿದ್ದುಪಡಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಮಂಗಳೂರು ಸಜ್ಜು; ಪೊಲೀಸ್ ಸರ್ಪಗಾವಲು

0
1

ಮಂಗಳೂರು:- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನ ಹೊರವಲಯ ಅಡ್ಯಾರ್ ಕಣ್ಣೂರಿನಲ್ಲಿ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜುಗೊಂಡಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ನೂರಾರು ಸಂಘ ಸಂಸ್ಥೆಗಳು, ಮಸೀದಿ ಆಡಳಿತ ಮಂಡಳಿಗಳು ಬೆಂಬಲ ಸೂಚಿಸಿವೆ. ಸಮಾವೇಶದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದ್ದು, ಮಂಗಳೂರಿಗೆ ಆಗಮಿಸುವ ವಾಹನಗಳನ್ನು ಮೆಲ್ಕಾರ್ ಮೂಲಕ ಕಳುಹಿಸಲು ಪೊಲೀಸರು ಮುಂದಾಗಿದ್ದಾರೆ.
500 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದ್ದು, ಕಾರ್ಯಕ್ರಮಗಳಿಗೆ ಬರುವ ವಾಹನಗಳ ತಪಾಸಣೆಗೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ.
ಈ ಸಮಾವೇಶದಲ್ಲಿ ‘ನಾವು ಭಾರತೀಯರು’ ತಂಡದ ನಿವೃತ್ತ ಐಎಎಸ್ ಅಧಿಕಾರಿಗಳಾದ ಹರ್ಷ ಮಂದರ್ ಮತ್ತು ಕಣ್ಣನ್ ಗೋಪಿನಾಥನ್, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಖಾಝಿಗಳಾದ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್, ಸೈಯದ್ ಫಝಲ್ ಕೋಯಮ್ಮ ತಂಙಳ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯುಕೆ ಕಣಚೂರು ಮೋನು, ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನಾ, ಕೆಥೋಲಿಕ್ ಸಭಾದ ಅಧ್ಯಕ್ಷ ಪಾವ್ಲ್ ರೂಫಿ ಡಿಕಾಸ್ತಾ, ಶಾಸಕರಾದ ಯು.ಟಿ. ಖಾದರ್, ಬಿ.ಎಂ. ಫಾರೂಕ್, ಮಾಜಿ ಶಾಸಕ ಮೊಯ್ದಿನ್ ಬಾವಾ ಮತ್ತಿತರರು ಭಾಗವಹಿಸಲಿದ್ದಾರೆ.
ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಬೆಂಬಲ ವ್ಯಕ್ತವಾಗಿವೆ.   ಕೇಂದ್ರ ಸರಕಾರವು ಜಾರಿಗೆ ತರಲು ಉದ್ಧೇಶಿಸಿರುವ ಸಂವಿಧಾನ ವಿರೋಧಿ ಪೌರತ್ವ ಕಾಯ್ದೆಗಳ ವಿರುದ್ಧ ನಡೆಯುವ ಪ್ರತಿಭಟನೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಬೆಂಬಲ ಘೋಷಿಸಿದೆ.
ಪ್ರತಿಭಟನಾ ಸಮಾವೇಶದ ಹಿನ್ನಲೆಯಲ್ಲಿ ಜ.15ರ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಬಿಸಿರೋಡ್‌ನಿಂದ ಮಂಗಳೂರಿಗೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.  ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ ಮೂಲಕ ಶಿರಾಡಿ ಘಾಟ್‌ನಲ್ಲಿ ಪ್ರಯಾಣಿಸಬೇಕು.   ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ಕೊಣಾಜೆ-ತೊಕ್ಕೊಟ್ಟು ಮೂಲಕ ಮೆಲ್ಕಾರ್-ಬಿ.ಸಿರೋಡ್‌ನಲ್ಲಿ ತಿರುಗಿ ಮಂಗಳೂರು ನಗರಕ್ಕೆ ಪ್ರವೇಶಿಸಬೇಕು. ಮಂಗಳೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ನಂತೂರಿನಲ್ಲಿ ತಿರುವು ಪಡೆದು ಪಂಪ್‌ವೆಲ್-ತೊಕ್ಕೊಟ್ಟು-ಕೊಣಾಜೆ-ಬಿ.ಸಿ ರೋಡ್ ಮೂಲಕ ಸಾಗಬೇಕು. ಬಿ.ಸಿರೋಡ್‌ನಿಂದ ಮಂಗಳೂರಿಗೆ ಬರುವ ವಾಹನಗಳು ಪೊಳಲಿ- ಕೈಕಂಬ ಮೂಲಕ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ.

loading...