ಶಾಲಾ ಆವರಣದಲ್ಲೊಂದು ಮಕ್ಕಳ ಸಂತೆ

0
9

ಲಕ್ಷ್ಮಣ ಕಿಶೋರ
ಮಹಾಲಿಂಗಪುರ: ಮಕ್ಕಳಲ್ಲಿ ಪಠ್ಯವಿಷಯದ ಜೊತೆ ವ್ಯವಹಾರಿಕ ಜ್ಞಾನವನ್ನು ಮೂಡಿಸುವುದೇ ಮಕ್ಕಳ ಸಂತೆ ಮೇಳದ ಮೂಲ ಉದ್ದೇಶ ಎಂದು ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶೇಖರ ಅಂಗಡಿ ಹೇಳಿದರು.
ಸ್ಥಳೀಯ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ಮಕ್ಕಳಿಗೆ ತರಗತಿಯಲ್ಲಿ ಕಲಿಯುವ ಶಿಕ್ಷಣದ ಜೊತೆ ಸಮಾಜದಲ್ಲಿ ಜೀವಿಸುವ ವ್ಯಾವಹಾರಿಕ ಜ್ಞಾನದ ಅವಶ್ಯಕತೆ ಪೂರೈಸಲು ಮಕ್ಕಳ ಸಂತೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಪನ್ಮೂಲ ವ್ಯಕ್ತಿ ಎಸ್.ಎನ್. ಬ್ಯಾಳಿ ಮಾತನಾಡಿ ಮಕ್ಕಳು ತರಗತಿಯಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಸಮೀಕರಿಸಿಕೊಳ್ಳುವ ಉದ್ದೇಶದಿಂದ ಮತ್ತು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಬೆಳೆಸುವ ದೃಷ್ಟಿಯಿಂದ ಮಕ್ಕಳ ಸಂತೆ ಅತ್ಯಾವಶ್ಯಕವಾಗಿರುತ್ತದೆ ಎಂದರು.
ಕೊತ್ತAಬರಿ ,ಕರಿಬೇವು ,ಮೆಣಸಿನಕಾಯಿ, ಆಲೂಗಡ್ಡೆ ಯಾರಿಗೆ ಬೇಕು ಬರ್ರಿ, ಯಾರಿಗೆ ಬೇಕು ಎಂದು ಮಕ್ಕಳು ಕೂಗುತ್ತಿದ್ದ ಸಂಭ್ರಮ, ಪಾಲಕರು ಅವುಗಳನ್ನು ಖರೀದಿಸಿದಾಗ ಅವರ ಮುಖದಲ್ಲಿ ಮೂಡಿದ ಮಂದಹಾಸ ನೆರೆದಿದ್ದ ಸರ್ವ ಪಾಲಕರ ಮುಖದಲ್ಲಿ ಖುಷಿ ಮೂಡಿಸಿತ್ತು .ಇಂದು ಮಕ್ಕಳ ಸಂತೆಯಲ್ಲಿ ಮಕ್ಕಳೇ ವ್ಯಾಪಾರಸ್ಥರಾಗಿ ಕೈಬಳೆ, ಚಕ್ಕುಲಿ, ಪಾಪಡಿ, ಬಾಳೆಹಣ್ಣು, ಮೂಲಂಗಿ, ಬಟಾಟೆ, ಕೋಡುಬಳೆ ಮಾರುತ್ತಿದ್ದ ದೃಶ್ಯ ಎಂಥವರನ್ನೂ ಆಕರ್ಷಿಸುತ್ತಿತ್ತು. ಶಾಲಾ ಆವರಣದಲ್ಲಿ ಸಂತೆಯೇ ಮೇಳೈಸಿತ್ತು. ಮಕ್ಕಳು ಕರ್ನಾಟಕ ನಕ್ಷೆಯ ರಂಗೋಲಿ ಹಾಕಿ ಅದರಲ್ಲಿ ಆಯಾ ಜಿಲ್ಲೆಗಳ ಪ್ರಮುಖ ಬೆಳೆಗಳನ್ನು ತುಂಬಿ ಇಡೀ ಕರ್ನಾಟಕದ ವೈವಿಧ್ಯ ಕೃಷಿ ಬೆಳೆಗಳನ್ನು ಪ್ರಕಟಿಸಿದ್ದು ಎಂಥವರಿಗೂ ಸುಲಭ ಮತ್ತು ಸರಳವಾಗಿ ಅರ್ಥವಾಗುವಂತಿತ್ತು.
ವಚನ ಸಾಹಿತ್ಯ ಪರಿಷತ್ ವಲಯ ಘಟಕದ ಅಧ್ಯಕ್ಷೆ ಭಾಗ್ಯಶ್ರೀ ಕೋಟಿ ಮಾತನಾಡಿ ಶಾಲೆಗಳಲ್ಲಿ ಪಾಠ ಬೋಧನೆಯ ಜೊತೆ ವ್ಯವಹಾರಿಕ ಜ್ಞಾನ ಬೆಳೆಸುವ ಇಂತಹ ಕಾರ್ಯಕ್ರಮಗಳ ಅಗತ್ಯ ಇಂದು ಅನಿವಾರ್ಯವಾಗಿದೆ ಎಂದರು.
ಖ್ಯಾತ ವೈದ್ಯೆ ಅಕ್ಕನ ಬಳಗದ ಅಧ್ಯಕ್ಷೆ ಡಾ. ಉಷಾ ಬೆಳಗಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಅರುಣಾ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಅರ್ಚನಾ ಕಡಪಟ್ಟಿ, ಭಾರತಿ ಹಳ್ಳಿ, ನಿವೃತ್ತ ಶಿಕ್ಷಕ ಎಸ್. ಐ. ಮಠದ, ಎಸ್. ಸಿ. ಹಳ್ಳಿ ಇದ್ದರು. ಮುಖ್ಯೋಪಾಧ್ಯಾಯಿನಿ ಗೀತಾ ಪಾಟೀಲ ಸ್ವಾಗತಿಸಿ, ಶಿಕ್ಷಕಿ ಎಸ್. ಬಿ. ಹಿರೇಮಠ ಪುಷ್ಪಾರ್ಪಣೆ ಮಾಡಿದರು. ಶಿಕ್ಷಕಿ ಜೆ. ಜಿ. ಸೊನೋನೆ ನಿರೂಪಿಸಿದರು ಶಿಕ್ಷಕಿ ಎ. ಜಿ. ಚಿಚಖಂಡಿ ವಂದಿಸಿದರು.

loading...