ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಪ್ರತಿ ಮನೆಯಲ್ಲಿ ಅರಿವು ಮೂಡಿಸಬೇಕು: ಸಿಇಒ ರಮೇಶ ದೇಸಾಯಿ

0
21

ಹಾವೇರಿ: ಹೆಣ್ಣು ಮಕ್ಕಳ ರಕ್ಷಣೆಯ ಜಾಗೃತಿ ಕೇವಲ ಸಮಾರಂಭಗಳಿಗೆ ಸೀಮಿತವಾಗದೇ ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಅರಿವು ಮೂಡಬೇಕು. ಸ್ವಜಾಗೃತಿ ಮೂಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಅವರು ಹೇಳಿದರು.
ಮಗಳನ್ನು ಉಳಿಸಿ ಮಗಳನ್ನು ಓದಿಸಿ ಯೋಜನೆಯ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ನಗರದ ಜಿಲ್ಲಾ ಭಾಲಭವನ ಉದ್ಯಾನವನದಲ್ಲಿ ಕಾರ್ಯಕ್ರಮ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಲಿಂಗಾನುಪಾತದಲ್ಲಿರುವ ವ್ಯತ್ಯಾಸ ಗಮನಿಸಿದಾಗ ಭವಿಷ್ಯದ ದಿನಗಳಲ್ಲಿ ನಾಗರಿಕ ಸಮಾಜಕ್ಕೆ ದೊಡ್ಡ ಪ್ರಮಾಣದ ಪೆಟ್ಟುಬೀಳುವ ಸಂಭವವಿದೆ. ೨೦೧೧ರ ಜನಗಣತಿ ಪ್ರಕಾರ ಒಂದು ಸಾವಿರ ಪುರುಷರಿಗೆ ೯೫೪ ಮಹಿಳೆಯರಿದ್ದಾರೆ. ಚುನಾವಣೆ ಮತದಾರರ ಪಟ್ಟಿಯನ್ನು ಅವಲೋಕಿಸಿದಾಗ ಒಂದು ಸಾವಿರ ಪುರುಷರಿಗೆ ೮೫೦ ಮಹಿಳೆಯರಿದ್ದಾರೆ. ಈ ವ್ಯತ್ಯಯ ಕಡಿಮೆಯಾಗಬೇಕು. ಸಮಾಜದಲ್ಲಿ ಭ್ರೂಣ ಹತ್ಯೆ ಹೆಚ್ಚಾಗಿದ್ದರಿಂದ ಮಹಿಳೆಯರ ಕೊರತೆ ಕಾಣುತ್ತಿದೆ. ಈ ನ್ಯೂನ್ಯತೆಯನ್ನು ಸರಿಪಡಿಸಬೇಕು ಎಂದು ಹೇಳಿದರು.
ಪ್ರತಿಯೊಂದು ಮನೆಯಲ್ಲೂ ಒಂದು ಹೆಣ್ಣು ಮಗು ಇದ್ದರೆ ಮನೆಯಲ್ಲಿ ಲವಲವಿಕೆ, ಜೀವಂತಿಕೆ ಹಾಗೂ ತಾಯಿ ಮಮತೆ ಮನೆಮಾಡಿರುತ್ತದೆ. ಪ್ರತಿ ಹೆಣ್ಣು ಕುಟುಂಬ ನಿರ್ವಹಣೆ ಸಾಮರ್ಥ್ಯವುಳ್ಳವಾಳಾಗಿದ್ದಾಳೆ ಹಾಗೂ ಭಾವನಾತ್ಮಕ ಜೀವಿಯಾಗಿದ್ದಾಳೆ. ಇಂತಹ ಹೆಣ್ಣು ಮಗುವನ್ನು ರಕ್ಷಿಸುವುದು ಮನೆಯ ಪ್ರತಿ ಹೆಣ್ಣು ಮಕ್ಕಳ ಹೊಣೆಯಾಗಿದೆ. ಮಹಿಳೆಯರು ಭ್ರೂಣ ಹತ್ಯೆಗೆ ಪ್ರೋತ್ಸಾಹ ನೀಡಬಾರದು. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹೆಣ್ಣುಮಕ್ಕಳ ಲಿಂಗಾನುಪಾತ ಹೆಚ್ಚಳಕ್ಕೆ, ಶಿಕ್ಷಣ ಹಾಗೂ ರಕ್ಷಣೆಯ ಅರಿವು ಮೂಡಿಸಬೇಕು ಹಾಗೂ ಭ್ರೂಣಹತ್ಯೆಗೆ ಹಾಗೂ ಬಾಲ್ಯವಿವಾಹಗಳಿಗೆ ಅವಕಾಶ ನೀಡಬಾರದು. ಸಮಾಜದ ಬಗ್ಗೆ ಚಿಂತನೆ ಹಾಗೂ ಕಾಳಜಿ ಹೊಂದಿರಬೇಕು. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಾಜದ ನ್ಯೂನ್ಯತೆಗಳನ್ನು ತೊಡೆದುಹಾಕಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಹೆಣ್ಣು ಮಕ್ಕಳನ್ನು ಸಂರಕ್ಷಣೆಯ ಜೊತೆಗೆ ಅವರನ್ನು ಒಂದು ದೊಡ್ಡ ಸಾಧಕಿಯನ್ನಾಗಿ ಮಾಡುವ ಹೊಣೆ ಪಾಲಕ ಪೋಷಕರದಾಗಿರುತ್ತದೆ.ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿಗೆ ಸರ್ಕಾರ ಹತ್ತು ಹಲವಾರು ಯೋಜನೆಗಳು ಜಾರಿಗೊಳಿಸಿದೆ. ಈ ಪ್ರಯೋಜನೆ ಪಡೆದುಕೊಳ್ಳಬೇಕು. ಇಂದಿನ ದಿನಗಳಲ್ಲಿ ಲಿಂಗಾನುಪಾತದ ಅರಿವು ಹೆಣ್ಣು ಮಕ್ಕಳಲ್ಲಿ ಬಂದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಣ್ಣು ಮಗುವಿನ ಹುಟ್ಟುಹಬ್ಬ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು. ಕುಮಾರಿ ಅನ್ವಿತಾ ಇವಳ ಹುಟ್ಟುಹಬ್ಬದ ಪ್ರಯುಕ್ತ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. ಸಮಾಜ ಸುಧಾರಕಿ ಶ್ರೀಮತಿ ಹಸೀನಾ ಹೆಡಿಯಾಲ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಭಾಗ್ಯಲಕ್ಷಿö್ಮÃ ಬಾಂಡ್‌ಗಳನ್ನು ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯ ಉಳಿತಾಯ ಖಾತೆ ಪುಸ್ತಕಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ ವೈ ಶೆಟ್ಟೆಪ್ಪನವರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಉಮಾ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ತೇಜಸ್ವೀನಿ ಕೊಂಡಿ, ಸೋಮನಗೌಡ ಗಾಳಿಗೌಡ್ರ, ಅಂಗನವಾಡಿಯ ಕಾರ್ಯಕರ್ತೆಯರು, ಮಕ್ಕಳು ಇದ್ದರು.

loading...