ಡಿಕಾಕ್ ಶತಕ, ದಕ್ಷಿಣ ಆಫ್ರಿಕಾಗೆ ಏಳು ವಿಕೆಟ್ ಜಯ

0
7

ಕೇಪ್ ಟೌನ್:- ನಾಯಕ ಕ್ವಿಂಟನ್ ಡಿಕಾಕ್ (107) ಹಾಗೂ ತೆಂಬು ಬವುಮಾ (98) ಅವರ ಭರ್ಜರಿ ಆಟದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ಏಳು ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ, ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ನೀಡಿದ 259 ರನ್ ಗಳ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ ಗೆ ಡಿಕಾಕ್ ಹಾಗೂ ಬವುಮಾ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. ಈ ಜೋಡಿ ಆತಿಥೇಯ ತಂಡ ಗೆಲುವಿನ ಕನಸು ಕಾಣಲು ಸಹಾಯ ಮಾಡಿತು.
ಸುಮಾರು 30 ಓವರ್ ಗಳ ಕಾಲ ಕ್ರೀಸ್ ನಲ್ಲಿ ನಿಂತ ಡಿಕಾಕ್ ಹಾಗೂ ಬವುಮಾ ಜೋಡಿ ಶತಕದ ಜೊತೆಯಾಟವನ್ನು ನೀಡಿತು. ಡಿಕಾಕ್ 113 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 107 ರನ್ ಬಾರಿಸಿ ಔಟ್ ಆದರು.
ಬವುಮಾ ಎರಡು ರನ್ ಗಳಿಂದ ಶತಕ ವಂಚಿತರಾದರು. ಇವರ ಸೊಗಸಾದ ಇನ್ನಿಂಗ್ಸ್ ನಲ್ಲಿ 5 ಬೌಂಡರಿಂ ಹಾಗೂ 2 ಸಿಕ್ಸರ್ ಸೇರಿವೆ. ಅಂತಿಮವಾಗಿ ಆಫ್ರಿಕಾ 47.4 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 259 ರನ್ ಸೇರಿಸಿತು.
ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಜೇಸನ್ ರಾಯ್ (32) ಹಾಗೂ ಜಾನಿ ಬೇರ್ ಸ್ಟೋ (19) ಜೋಡಿ ಮೊದಲ ವಿಕೆಟ್ ಗೆ 51 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ (17), ಇಯಾನ್ ಮಾರ್ಗನ್ (11) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಏಳನೇ ವಿಕೆಟ್ ಗೆ ಕ್ರಿಸ್ ವೋಕ್ಸ್ ಹಾಗೂ ಡೆನ್ಲಿ ಜೋಡಿ 91 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಕ್ರಿಸ್ ವೋಕ್ಸ್ 42 ಎಸೆತಗಳಲ್ಲಿ 40 ರನ್ ಬಾರಿಸಿದರು. ಡೆನ್ಲಿ 103 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಾಯದಿಂದ 87 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಅಂತಿಮವಾಗಿ ಇಂಗ್ಲೆಂಡ್ 50 ಓವರ್ ಗಳಲ್ಲಿ 8 ವಿಕೆಟ್ ಗೆ 258 ರನ್ ಸೇರಿಸಿತು. ದಕ್ಷಿಣ ಆಫ್ರಿಕಾ ಪರ ತಬಿಬ್ ಶಂಶಿ ಮೂರು ವಿಕೆಟ್ ಪಡೆದರು.

loading...