ಇ-ಕಛೇರಿ ತಂತ್ರಾಂಶ ಅಭಿವೃದ್ಧಿ ಕಾಗದ ರಹಿತ ಆಡಳಿತಕ್ಕೆ ಮುನ್ನುಡಿ

0
13

ಕೊಪ್ಪಳ: ವಿವಿಧ ಸಾಮಾಜಿಕ ಭದ್ರತೆ ಯೋಜನೆ, ವಸತಿ, ಮನೆ ಕಟ್ಟಲು ಪರವಾನಗಿ, ಅತಿಕ್ರಮ ತೆರವು, ವಿದ್ಯುತ್, ನೀರಿನ ಸೌಕರ್ಯ ಕಲ್ಪಿಸುವ ಪರವಾನಿಗೆಗೆ ದಿನಗಟ್ಟಲೆ ಅಲೆಯಬೇಕಾಗುತ್ತದೆ. ಈ ಸಮಸ್ಯೆಗಳಿಂದ ಜನರನ್ನು ಪಾರು ಮಾಡುವ ಉದ್ದೇಶದಿಂದ ಉನ್ನತಮಟ್ಟದ ತಂತ್ರಜ್ಞಾನದಿಂದ ಸುಗಮ ಆಡಳಿತಕ್ಕೆ ಈ ಆಡಳಿತವನ್ನು ಜಾರಿಗೆ ತಂದಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಹೇಳಿದ್ದಾರೆ.
ಇ-ತಂತ್ರಾಂಶವನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಳವಡಿಸಿಕೊಂಡ ಸ್ಥಳೀಯ ಸಂಸ್ಥೆಯಾದ ಕೊಪ್ಪಳ ನಗರಸಭೆ ಕಾಗದ ರಹಿತ ಆಡಳಿತಕ್ಕೆ ಚಾಲನೆ ನೀಡಿದ ಅವರು, ಕಾಗದ ರಹಿತ ಆಡಳಿತ, ಸಾರ್ವಜನಿಕರ ಮಾಹಿತಿಯನ್ನು ಸುಭದ್ರವಾಗಿ ಸಂಗ್ರಹಿಸುವುದು ಮತ್ತು ಅವಶ್ಯಕವೆನಿಸಿದಾಗ ನೀಡಲು ಅನುಕೂಲವಾಗುತ್ತದೆ ಅಲ್ಲದೆ ಸಮಸ್ಯೆಗಳನ್ನು ಹೊತ್ತು ನಿತ್ಯ ನಗರಸಭೆಗೆ ಬರುವ ಸಾರ್ವಜನಿಕರು ಗಂಟೆಗಟ್ಟಲೆ ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿಗೆ ತಿಲಾಂಜಲಿ ನೀಡುವ ಉದ್ದೇಶದಿಂದ ಇ-ಆಡಳಿತ ಜಾರಿಗೆ ತಂದಿದ್ದು, ಈ ಮೂಲಕ ಮುನ್ನುಡಿ ಬರೆದಿದೆ ಎಂದಿದ್ದಾರೆ.
ಮಾನವ ಶ್ರಮ ವ್ಯರ್ಥ, ಕಾಗದಗಳ ಬಳಕೆಯಿಂದ ಕೆಲಸ ನಿಧಾನವಾಗುತ್ತದೆ. ಅಲ್ಲದೆ ಇ-ತ್ಯಾಜ್ಯಗಳನ್ನು ಹೆಚ್ಚಿಸುವುದಕ್ಕೆ ಅವಕಾಶವಿರುವುದಿಲ್ಲ. ಪರಿಸರ ಸಂಬಂಧಿ ಯೋಜನೆಗಳಲ್ಲಿ ಇದು ಒಂದಾಗಿರುವುದರಿಂದ ಇದರ ಸಮರ್ಪಕ ಅನುಷ್ಠಾನ ಅಗತ್ಯವಾಗಿದೆ.
ಒಂದು ಕೆಲಸಕ್ಕೆ ಸಾರ್ವಜನಿಕರು ಗಂಟೆಗಟ್ಟಲೆ ನಿಲ್ಲಬೇಕಾಗುತ್ತದೆ. ಮಧ್ಯವರ್ತಿಗಳ ಹಾವಳಿಯಿಂದ ತೊಂದರೆಯಾಗುತ್ತಿದ್ದು, ನಾಳೆ ಬಾ ಎಂಬ ಸಿಬ್ಬಂದಿ ಉತ್ತರವೂ ಮಾಮೂಲಿಯಾಗಿತ್ತು. ಈ ತಂತ್ರಾಂಶದಿಂದ ಅರ್ಜಿ ಸಲ್ಲಿಸಿದ ತಕ್ಷಣ ರಶೀದಿ ನೀಡಿ ಪಡೆಯಬಹುದಾಗಿದೆ. ಹಾಗೂ ಸಲ್ಲಿಸಿದ ಅರ್ಜಿಯ ಸ್ಥಿತಿ ಮತ್ತು ಕೈಗೊಂಡಿರುವ ಕ್ರಮದ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಸಿಗಲಿದೆ.
ಉತ್ತಮ ಗುಣಮಟ್ಟದ ಸೇವೆಯನ್ನು ಪರಿಣಾಮಕಾರಿಯಾಗಿ ಸೂಚಿಸಿದ ಅವಧಿಯಲ್ಲಿ ತಲುಪಿಸುವ ಈ ಯೋಜನೆ ಇದಾಗಿದೆ. ಇ-ಗವರ್ನನ್ಸ್ ಸಹಕಾರದೊಂದಿಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಇ-ಕಚೇರಿ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಟಿ. ತಿಳಿಸಿದ್ದಾರೆ.

ಈ ತಂತ್ರಾಂಶದಿಂದ ಕೈ ಬರಹದ ಪದ್ಧತಿ ಕಡಿಮೆಯಾಗುತ್ತದೆ. ಅಲ್ಲದೆ ಮಾನವ ಸಹಜ (ಮ್ಯಾನುವಲ್) ತಪ್ಪುಗಳು ನುಸುಳಿ ತೊಂದರೆಯಾಗುವುದು ತಪ್ಪುತ್ತದೆ. ಇ-ಆಡಳಿತಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿ, ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ಧರಾಮೇಶ್ವರ, ನಗರಸಭೆ ಪ್ರಭಾರ ಪೌರಾಯುಕ್ತ ಮಂಜುನಾಥ ಮತ್ತು ನಗರಸಭೆ ಸಿಬ್ಬಂದಿ ಹಾಜರಿದ್ದರು.

loading...