ಹತ್ತು ಮಂದಿ ನೂತನ ಶಾಸಕರು ಸಚಿವರಾಗಿ ಪ್ರಮಾಣ: ರಾಜ್ಯಪಾಲರಿಂದ ಪ್ರತಿಜ್ಞಾವಿಧಿ ಬೋಧನೆ

0
3

ಬೆಂಗಳೂರು:- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸುಸೂತ್ರವಾಗಿ ಇಂದು ರಾಜಭವನದಲ್ಲಿ ನಡೆದಿದ್ದು, ರಾಜ್ಯಪಾಲ ವಜುಬಾಯಿ ವಾಲಾ ಅವರು ನೂತನ 10 ಮಂದಿ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.ಮೊದಲಿಗೆ ಎಸ್‌.ಟಿ.ಸೋಮಶೇಖರ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದಂತೆ ರಮೇಶ ಜಾರಕಿಹೊಳಿ, ಆನಂದ್ ಸಿಂಗ್‌, ಡಾ.ಕೆ.ಸುಧಾಕರ್, ಬೈರತಿ ಬಸವರಾಜ, ಶಿವರಾಂ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ನಾರಾಯಣ ಗೌಡ, ಶ್ರೀಮಂತ ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬಿ.ಸಿ.ಪಾಟೀಲ್ ಅವರು ದೇವರ ಹೆಸರಿನಲ್ಲಿ, ಕ್ಷೇತ್ರದ ಜನರು, ತಂದೆ ತಾಯಿ, ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಮೇಶ್ ಜಾರಕಿಹೊಳಿ ಹೊರತುಪಡಿಸಿ ಉಳಿದೆಲ್ಲಾ ಸಚಿವರು ಮುಖ್ಯಮಂತ್ರಿಯವರ ಕಾಲಿಗೆರಗಿ ಆಶೀರ್ವಾದ ಪಡೆದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಪಾಲ ವಜುಬಾಯಿ ನೂತನ ಸಚಿವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ರಾಜಭವನದ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ಸಚಿವರ ಕುಟುಂಬಸ್ಥರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಕ್ಷೇತ್ರದ ಜನರು ಕೂಡ ಆಗಮಿಸಿದ್ದರು. ಪ್ರಮಾಣ ವಚನ ಸಮಾರಂಭದ ವೇಳೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಸಚಿವ ಸ್ಥಾನ ವಂಚಿತರಾದ ಎಚ್. ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಆದರೆ ಅಸಮಾಧಾನಿತಗೊಂಡ ಮೂಲ ಬಿಜೆಪಿ ಶಾಸಕರು ಗೈರಾಗಿದ್ದುದು ಕಂಡುಬಂತು.
ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವಥನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಸಿ.ಟಿ.ರವಿ ಮತ್ತಿತರರು ಪಾಲ್ಗೊಂಡಿದ್ದರು.
loading...