ಮೊಹಮ್ಮದ್ ಶಮಿ ಮಾರಕ ದಾಳಿ: ಭಾರತಕ್ಕೆ 87 ರನ್ ಮುನ್ನಡೆ

0
19

ಹ್ಯಾಮಿಲ್ಟನ್:- ಮೊಹಮ್ಮದ್ ಶಮಿ (17 ಕ್ಕೆ 3) ಅವರ ಶಿಸ್ತುಬದ್ಧ ದಾಳಿಯ ನೆರವಿನಿಂದ ಭಾರತ ತಂಡ ಮೂರು ದಿನಗಳ ಅಭ್ಯಾಸ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ.
ಸೆಡಾನ್ ಅಂಗಳದಲ್ಲಿ ಎರಡನೇ ದಿನ ಪ್ರಥಮ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಇಲೆವೆನ್ ತಂಡ 74.2 ಓವರ್‌ಗಳಿಗೆ 235 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 28 ಮುನ್ನಡೆ ಸಾಧಿಸಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ 7 ಓವರ್‌ಗಳಿಗೆ ವಿಕೆಟ್ ನಷ್ಟವಿಲ್ಲದೆ 59 ರನ್ ಗಳಿಸಿದೆ. ಒಟ್ಟಾರೆ, ಭಾರತ 87 ರನ್ ಮುನ್ನಡೆ ಗಳಿಸಿದೆ.
ಪ್ರಥಮ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ಆರಂಭಿಕರಾದ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕಿವೀಸ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದ ಆರಂಭಿಕ ಸ್ಥಾನಕ್ಕೆ ರೇಸ್‌ನಲ್ಲಿರುವ ಪೃಥ್ವಿ ಶಾ 25 ಎಸೆತಗಳಲ್ಲಿ 35 ರನ್ ಸಿಡಿಸಿದರು. ಮಯಾಂಕ್ 17 ಎಸೆತಗಳಲ್ಲಿ 23 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಎಲೆವೆನ್ ತಂಡ ಆರಂಭಿಕ ಆಘಾತ ಅನುಭವಿಸಿತು. ವಿಲ್ ಯಂಗ್(2) ಅವರನ್ನು ಜಸ್ಪ್ರಿತ್ ಬುಮ್ರಾ ಬೇಗ ಔಟ್ ಮಾಡಿದರು. ನಂತರ, ಟಿಮ್ ಸೀಫರ್ಟ್(9) ಅವರನ್ನು ಮೊಹಮ್ಮದ್ ಶಮಿ ಔಟ್ ಮಾಡಿದರು. 67 ಎಸೆತಗಳಲ್ಲಿ 34 ರನ್ ಗಳಿಸಿ ಆಡುತ್ತಿದ್ದ ರಚಿನ್ ರವೀಂದ್ರ ಅವರನ್ನು ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಭಾರತದ ಬೌಲಿಂಗ್ಗೆ ಪ್ರತಿರೋಧ ತೋರಿದ ಹೆನ್ರಿ ಕೂಪರ್ 40, ಟಾಮ್ ಬ್ರೂಸ್ 31 ಹಾಗೂ ಡೆರ್ಲಿ ಮಿಚೆಲ್ 32 ರನ್ ಗಳಿಸಿದರು. ಅತ್ಯುತ್ತಮ ಬ್ಯಾಟಿಂಗ್ ಮಾಡತ್ತಿದ್ದ ಇವರು ದೊಡ್ಡ ಇನಿಂಗ್ಸ್ ಕಟ್ಟಲು ಭಾರತದ ಬೌಲಿಂಗ್ ವಿಭಾಗ ಅವಕಾಶ ನೀಡಲಿಲ್ಲ.
ಭಾರತದ ಪರ ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದರೆ, ಜಸ್ಪ್ರಿತ್ ಬುಮ್ರಾ, ಉಮೇಶ್ ಯಾದವ್ ಹಾಗೂ ನವದೀಪ್ ಸೈನಿ ತಲಾ ಎರಡು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಭಾರತ
ಪ್ರಥಮ ಇನಿಂಗ್ಸ್: 263
ದ್ವಿತೀಯ ಇನಿಂಗ್ಸ್: 7 ಓವರ್ಗಳಿಗೆ 59/0 (ಪೃಥ್ವಿ ಶಾ ಔಟಾಗದೆ 35, ಮಯಾಂಕ್ ಅಗರ್ವಾಲ್ ಔಟಾಗದೆ 23)
ನ್ಯೂಜಿಲೆಂಡ್
ಪ್ರಥಮ ಇನಿಂಗ್ಸ್: 74.2 ಓವರ್‌ಗಳಿಗೆ 235/10 (ಹೆನ್ರಿ ಕೂಪರ್ 40, ರಚಿನ್ ರವೀಂದ್ರ 34, ಡೆರ್ಲಿ ಮಿಚೆಲ್ 32, ಟಾಮ್ ಬ್ರೂಸ್ 31; ಮೊಹಮ್ಮದ್ ಶಮಿ 17 ಕ್ಕೆ 3, ಜಸ್ಪ್ರಿತ್ ಬುಮ್ರಾ 18 ಕ್ಕೆ 2, ಉಮೇಶ್ ಯಾದವ್ 49 ಕ್ಕೆ 2, ನವದೀಪ್ ಸೈನಿ 58 ಕ್ಕೆ 2)

loading...