ಕೊನೆಯ ದಿನ ಮಿಂಚಿದ ಮಯಾಂಕ್‌, ಪಂತ್‌ : ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ

0
8

ಹ್ಯಾಮಿಲ್ಟನ್:- ಕನ್ನಡಿಗ ಮಯಾಂಕ್‌ ಅಗರ್ವಾಲ್‌ (81 ನಿವೃತ್ತಿ) ಹಾಗೂ ರಿಷಭ್ ಪಂತ್ ( 70 ರನ್‌) ಅವರ ಅದ್ಭುತ ಬ್ಯಾಟಿಂಗ್‌ನೊಂದಿಗೆ ಭಾರತ ಹಾಗೂ ನ್ಯೂಜಿಲೆಂಡ್‌ ಇಲೆವೆನ್ ತಂಡಗಳ ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ಇಲ್ಲಿನ ಸೆಡಾನ್‌ ಪಾರ್ಕ್‌ ಅಂಗಳದಲ್ಲಿ ಎರಡನೇ ದಿನ ಭಾರತ ತಂಡದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರೆ, ಮೂರನೇ ಹಾಗೂ ಕೊನೆಯ ದಿನ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಮೆರೆದರು.
ಮೂರನೇ ದಿನವಾದ ಇಂದು ಮಯಾಂಕ್ ಅಗರ್ವಾಲ್‌ ಹಾಗೂ ರಿಷಭ್‌ ಪಂತ್‌ ಉತ್ತಮ ಜತೆಯಾಟವಾಡುವ ಮೂಲಕ ಮೂರನೇ ವಿಕೆಟ್‌ಗೆ 134 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡಿತು. ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರು 31 ಎಸೆತಗಳಲ್ಲಿ 39 ರನ್‌ ಗಳಿಸಿ ಔಟಾಗಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ವೃದ್ದಿಮನ್ ಸಾಹ 38 ಎಸೆತಗಳಲ್ಲಿ 30 ರನ್‌ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಟೆಸ್ಟ್‌ ಸರಣಿಯ ಆರಂಭಿಕ ಸ್ಥಾನದ ರೇಸ್‌ನಲ್ಲಿರುವ ಶುಭಮನ್‌ ಗಿಲ್‌ ಕೇವಲ ಎಂಟು ರನ್‌ ಗಳಿಸಿ ವೈಫಲ್ಯವನ್ನು ಮರುಕಳಿಸಿದರು.
ಶನಿವಾರ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡಕ್ಕೆ ಡೆರ್ಲಿ ಮಿಚೆಲ್‌ ಮೂರನೇ ದಿನ ಕೇವಲ ನಾಲ್ಕು ರನ್‌ ಸೇರಿಸಿದ ಪೃಥ್ವಿ ಶಾ ಅವರನ್ನುಕ್ಲೀನ್‌ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್‌ಗೆ ಅಟ್ಟಿದರು.
ಶುಭಮನ್‌ ಗಿಲ್‌ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ನಂತರ ಕ್ರೀಸ್‌ಗೆ ಬಂದ ರಿಷಭ್‌ ಪಂತ್ ಆತಿಥೇಯರನ್ನು ಸಮರ್ಥವಾಗಿ ದಂಡಿಸಿದರು. ಆ ಮೂಲಕ ಅರ್ಧಶತಕ ಸಿಡಿಸಿ ಟೆಸ್ಟ್‌ ಸರಣಿಗೂ ಮುನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡರು. 65 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಯೊಂದಿಗೆ 75 ರನ್‌ ಸಿಡಿಸಿದರು. ಇಶ್‌ ಸೋಧಿಯ ಸತತ ಎರಡು ಎಸೆತಗಳನ್ನು ಪಂತ್‌ ಸಿಕ್ಸರ್‌ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಟೆಸ್ಟ್ ಸರಣಿಯ ಖಾಯಂ ಆರಂಭಿಕ ಆಟಗಾರ ಮಯಾಂಕ್‌ ಅಗರ್ವಾಲ್ ಪ್ರಥಮ ಇನಿಂಗ್ಸ್‌ನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡು ಎರಡನೇ ಇನಿಂಗ್ಸ್‌ನಲ್ಲಿ ಆಡಿದರು. 99 ಎಸೆತಗಳಲ್ಲಿ 81 ರನ್ ಗಳಿಸಿದರು. ಇದರಲ್ಲಿ ಮೂರು ಸಿಕ್ಸರ್‌ ಹಾಗೂ 10 ಬೌಂಡರಿಗಳಿದ್ದವು. ಇಂದು ಹುಟ್ಟು ಹಬ್ಬ ಆಚರಿಸಿಕೊಂಡ ಮಯಾಂಕ್‌ ಅಗರ್ವಾಲ್‌ ಅರ್ಧಶತಕ ಸಿಡಿಸಿ ಸಂತಸಪಟ್ಟರು.
ಇದಕ್ಕೂ ಮುನ್ನ ಶನಿವಾರ ಮೊಹಮ್ಮದ್‌ ಶಮಿ, ಜಸ್ಪ್ರಿತ್‌ ಬುಮ್ರಾ, ಉಮೇಶ್‌ ಯಾದವ್‌ ಹಾಗೂ ನವದೀಪ್‌ ಸೈನಿ ಭಾರತದ ನಾಲ್ವರು ವೇಗಿಗಳು ನ್ಯೂಜಿಲೆಂಡ್‌ ಇಲೆವೆನ್ ತಂಡವನ್ನು 235 ಕ್ಕೆ ಆಲೌಟ್‌ ಮಾಡಿದ್ದರು.
ಶಮಿ 17 ರನ್‌ ನೀಡಿ ಮೂರು ವಿಕೆಟ್‌ ಪಡೆದರೆ, ಬುಮ್ರಾ, ಉಮೇಶ್‌ ಹಾಗೂ ಸೈನಿ ತಲಾ ಎರಡು ವಿಕೆಟ್‌ ಪಡೆದಿದ್ದರು. ಇನ್ನುಳಿದ ಒಂದು ವಿಕೆಟ್‌ ಆರ್‌.ಅಶ್ವಿನ್‌ ಪಡೆದುಕೊಂಡಿದ್ದರು.
ನ್ಯೂಜಿಲೆಂಡ್ ತಂಡದ ಹೆನ್ರಿ ಕೂಪರ್‌ 40, ರಚಿನ್‌ ರವೀಂದ್ರ ಹಾಗೂ ನಾಯಕ ಡೆರ್ಲಿ ಮಿಚೆಲ್‌ ಕ್ರಮವಾಗಿ 34 ಮತ್ತು 32 ರನ್‌ ಗಳಿಸಿದ್ದರು. ಭಾರತ ಮೊದಲನೇ ಇನಿಂಗ್ಸ್‌ನಲ್ಲಿ 263 ರನ್‌ಗಳಿಗೆ ಆಲೌಟ್‌ ಆಗಿತ್ತು. ಹನುಮ ವಿಹಾರಿ 101 ಹಾಗೂ ಚೇತೇಶ್ವರ ಪೂಜಾರ 93 ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್‌: ಭಾರತ 263/10 ಹಾಗೂ 252/4 (ಮಯಾಂಕ್‌ ಅಗರ್ವಾಲ್‌ 81(ನಿವೃತ್ತಿ), ರಿಷಭ್‌ ಪಂತ್‌ 70); ನ್ಯೂಜಿಲೆಂಡ್‌ 235/10 (ಹೆನ್ರಿ ಕೂಪರ್‌ 40, ಮೊಹಮ್ಮದ್‌ ಶಮಿ 17/3)

loading...