ಪಾದರಾಯನಪುರದಲ್ಲಿ ಗಲಾಟೆ: 54 ಜನರ ಬಂಧನ – ಸೌಮೇಂದು ಮುಖರ್ಜಿ

0
18

ಬೆಂಗಳೂರು:- ಕೊರೊನಾ ಶಂಕಿತರ ಕ್ವಾರಂಟೈನ್ ವಿರೋಧಿಸಿ ನಗರದ ಪಾದರಾಯನಪುರದಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿದಂತೆ 54 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು‌ ಮುಖರ್ಜಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಮಹಿಳೆ ನೀಡಿದ ಹೇಳಿಕೆ ಆಧರಿಸಿ 20 ಜನರನ್ನು ಜೆಜೆ ನಗರ ಪೊಲೀಸರು ವಶಕ್ಕೆ ಪಡೆದಿದ್ದು, ವಿಡಿಯೋ ಆಧರಿಸಿ 54 ಜನರನ್ನು ಬಂಧಿಸಲಾಗಿದೆ ಎಂದರು.

ಘಟನಾ ಸ್ಥಳದಲ್ಲಿ ಇನ್ನು ಕೆಲವರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದ್ದು, ಗಲಾಟೆಗೆ ಸಂಬಂಧಿಸಿದಂತೆ 5 ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆಯಿಂದ ಒಂದು ದೂರು ನೀಡಲಾಗಿದ್ದು, ಇನ್ನು ಪೊಲೀಸರು 4 ಪ್ರಕರಣಗಳು ದಾಖಲಿಸಿಕೊಂಡಿದ್ದಾರೆ‌ ಎಂದರು.

ಕೊರೊನಾ ಶಂಕಿತರನ್ನು ಸ್ಥಳಾಂತರ ಮಾಡುವ ವೇಳೆ ಭಾನುವಾರ ರಾತ್ರಿ ಗಲಾಟೆ ನಡೆದಿತ್ತು. ಇದು ಪೂರ್ವ ನಿಯೋಜಿತ ಕೃತ್ಯವೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.
ಬಂಧಿತರಾಗಿರುವ ಕೆಲವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ‌. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತ ಮಹಿಳೆ ಗಾಂಜಾ ಮಾರಾಟ ಮಾಡುತ್ತಿದ್ದಳು ಎಂದರು .

ಬಂಧಿತ ಮಹಿಳೆಯೇ ಹುಡುಗರನ್ನು ಕರೆಸಿ ಗಲಾಟೆ ಮಾಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ ಎಂದರು.

ಕೊರೊನಾ ಸೋಂಕಿತರು ಹೆಚ್ಚು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾದರಾಯನಪುರವನ್ನು ಸಂಪೂರ್ಣವಾಗಿ ಸೀಲ್‍ಡೌನ್ ಮಾಡಲಾಗಿತ್ತು. ಪಾದರಾಯನಪುರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಿ, ಪ್ರಮುಖ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಭಾನುವಾರ ಕೊರೊನಾ ಶಂಕಿತರನ್ನು ಬೇರೆಡೆಗೆ ಸ್ಥಳಾಂತರಿಸಲು ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಈ ವೇಳೆ ಜೀವ ರಕ್ಷಣೆಗೆ ಬಂದವರ ಮೇಲೆಯೇ ದಾಳಿ ನಡೆಸಲಾಗಿದೆ. ಅಲ್ಲದೇ, ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮತ್ತು ಚೆಕ್‍ಪೋಸ್ಟ್ ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಕೆಲ ಪೊಲೀಸರು ಇದಿದ್ದರಿಂದ ಪುಂಡರ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಒಟ್ಟು ನಾಲ್ಕು ಕಡೆ ಪುಂಡರು ದಾಳಿ ನಡೆಸಿದ್ದು, ಬಂಧಿತ ಮಹಿಳೆಯನ್ನು ಫರೋಜಾ ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಬಂಧಿತರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ.

loading...