ಕಾರ್ಮಿಕರಿಗೆ ಊರಿಗೆ ತೆರಳಲು ಮೂರು ದಿನ ಉಚಿತ ಬಸ್ ಸೌಲಭ್ಯ: ಮುಖ್ಯಮಂತ್ರಿ ಯಡಿಯೂರಪ್ಪ

0
21

ಬೆಂಗಳೂರು:- ಕಾರ್ಮಿಕರು ಮತ್ತು ಬಡ ಕೂಲಿ ಕಾರ್ಮಿಕರ ಪರಿಸ್ಥಿತಿಯನ್ನು ಗಮನಿಸಿ ಇಂದಿನಿಂದ ಮೂರು ದಿನಗಳವರೆಗೆ ಜಿಲ್ಲಾ ಕೇಂದ್ರಗಳಿಂದ ಮತ್ತು ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದಲ್ಲಿನ ತಮ್ಮ ತಮ್ಮ ಊರುಗಳಿಗೆ ಹೋಗುವ ಎಲ್ಲರಿಗೂ ಉಚಿತವಾಗಿ ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇದರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ನನ್ನ ಕಳಕಳಿಯ ಮನವಿ ಯಾವುದೇ ಬಸ್ ನಿಲ್ದಾಣಗಳಲ್ಲಿ ಯಾರು ನೂಕುನುಗ್ಗಲು ಮಾಡಬಾರದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಲಾಕ್‌ಡೌನ್ ಆದಾಗಿನಿಂದ ಊರಿನ ಕಡೆಗೆ ಹೋಗಲು ಕಾಯುತ್ತಿದ್ದ ವಲಸೆ ಕಾರ್ಮಿಕರು, ಸರ್ಕಾರ ಬಸ್ ವ್ಯವಸ್ಥೆ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ನಗರದ ಮೆಜೆಸ್ಟಿಕ್ ಬಸ್‌ ನಿಲ್ದಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೆಲವರು ರಾತ್ರಿಯಿಂದಲೇ ಬಸ್‌ ನಿಲ್ದಾಣಗಳಲ್ಲಿ ಬಸ್‌ಗಳಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು.

ಕೆಲವರು ಆಟೋ ರಿಕ್ಷಾಗಳಲ್ಲಿ ದುಬಾರಿ ಬಾಡಿಗೆ ಕೊಟ್ಟು ಬಂದಿದ್ದರೆ ಇನ್ನು ಕೆಲವರು 10ರಿಂದ 20 ಕಿಲೋ ಮೀಟರ್‌ ನಡೆದು ಕೊಂಡೇ ಬಂದಿದ್ದರು. ಅನ್ನ ಆಹಾರವಿಲ್ಲದೆ ಬಾರದ ಬಸ್ಸಿಗಾಗಿ ಕಾಯುತ್ತಿದ್ದರು. ಇಂದು ಬೆಳಗ್ಗೆ ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಆದಷ್ಟು ಬೇಗ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸಿ, ಅವರಿಂದ ಯಾವುದೇ ದರ ವಸೂಲಿ ಮಾಡಬೇಡಿ ಎಂದು ಸೂಚನೆ ಕೊಟ್ಟರು. ಅದರಂತೆ ಮುಂದಿನ ಮೂರು ದಿನಗಳವರೆಗೆ ಅಂದರೆ ಮಂಗಳವಾರದವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ದರ ವಸೂಲಿ ಮಾಡದೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಿದೆ.

ಮೆಜೆಸ್ಟಿಕ್‌ಗೆ ಸ್ಥಳಾಂತರ

ಕೆ‌ ಎಸ್ ಆರ್ ಟಿ‌ ಸಿ‌ ಯು ಇಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ, ಕಾರ್ಮಿಕರಿಗಾಗಿ
ಕೆಂಪೇಗೌಡ ಬಸ್ ನಿಲ್ದಾಣ ( ಮೆಜೆಸ್ಟಿಕ್) ನಿಂದ ಬಸ್ಸುಗಳನ್ನು ಕಾರ್ಯಚರಣೆಯನ್ನು , ಬಿಎಂಟಿ‌ ಸಿ ಬಸ್ ನಿಲ್ದಾಣ ( ಮೆಜೆಸ್ಟಿಕ್) ಗೆ ಸ್ಥಳಾಂತರಿಸಲಾಗಿದೆ.
( ಸಾಮಾಜಿಕ ಅಂತರವನ್ನು ಕಾಪಾಡಲು ಅನುಕೂಲವಾಗುವ ನಿಟ್ಟಿನಲ್ಲಿ) ಈ ವ್ಯವಸ್ಥೆ ಮಾಡಲಾಗಿದ್ದು, ಸದರಿ ಬಸ್ ವ್ಯವಸ್ಥೆಯು (ಕೆಂಪು ವಲಯ ಹೊರತು ಪಡಿಸಿ) ಬೇರೆ ಸ್ಥಳಗಳಿಗ ಕಾರ್ಯಚರಣೆಯಾಗಲಿದೆ. ಕಾರ್ಮಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು, ಸೂಕ್ತ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಹಕರಿಸಬೇಕು. ಬಸ್ಸುಗಳ ನಿರಂತರ ಪೂರೈಕೆ ಇರುತ್ತದೆ. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಬಸ್ಸುಗಳಿಗೆ ತೆರಳುವ ಮುನ್ನ ಸೂಕ್ತ ಆರೋಗ್ಯ ಪರಿಶೀಲನೆ ‌ನಡೆಸಿ, ಸಂಪೂರ್ಣ ಮಾಹಿತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಬಸ್ಸುಗಳ ನಿರ್ಗಮನದ ಮಾಹಿತಿಯನ್ನು ಸಂಬಂದಪಟ್ಟ ನಿಗಮದ ವಿಭಾಗಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನೀಡಲಾಗುತ್ತಿದೆ. ಮಾರ್ಗ ಮಧ್ಯೆ ಯಾವುದೇ ಪ್ರಯಾಣಿಕರನ್ನು ಇಳಿಸುವುದಿಲ್ಲ, ನಿಗದಿತ ಸ್ಥಳದ ಬಸ್ ನಿಲ್ದಾಣಗಳಲ್ಲಿಯೇ ಇಳಿಸಲಾಗುತ್ತಿದ್ದು, ಅಲ್ಲಿ ಅವರಿಗೆ ಮತ್ತೊಮ್ಮೆ ಜಿಲ್ಲಾಡಳಿತದಿಂದ ಆರೋಗ್ಯ ತಪಾಸಣೆ‌ ನಡೆಸಿ ಹೋಂ ಕ್ವಾರಂಟೈನ್‌ ಗೆ ಸಂಬಂಧಪಟ್ಟಂತೆ ಮಾಹಿತಿ‌ ನೀಡಲಾಗುತ್ತಿದೆ. ಇಂದು ಪ್ರತಿ‌ ಗಂಟೆಗೊಮ್ಮೆ ಬಸ್ ಕಾರ್ಯಚರಣೆಯ ಮಾಹಿತಿಯನ್ನು ಸಂಬಂಧಪಟ್ಟ ಜಲ್ಲಾಡಳಿತಕ್ಕೆ ನೀಡಲಾಗುತ್ತದೆ ಎಂದು ಕೆಎಸ್ಆರ್‌ಟಿಸಿ ಹೇಳಿಕೆಯಲ್ಲಿ ತಿಳಿಸಿದೆ.

loading...